ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಆ. 17: ಬಾಬರಿ ಮಸೀದಿಯನ್ನು ಮಂದಿರದ ಮೇಲೆ ಅಥವಾ ಹಿಂದೂ ಆರಾಧಾನಾ ಕಟ್ಟಡದ ಅವಶೇಷಗಳ ಮೇಲೆ ಕಟ್ಟಲಾಗಿತ್ತು ಎಂಬುದಕ್ಕೆ ಪುರಾವೆ ಹಾಜರುಪಡಿಸುವಂತೆ ಸಂಬಂಧಿತ ವಕೀಲರಿಗೆ ಸುಪ್ರೀಂಕೋರ್ಟು ಆದೇಶ ನೀಡಿದೆ. ಬಾಬರಿ ಜಮೀನು ಪ್ರಕರಣದಲ್ಲಿ ಹಿಂದೂ ವಾದಿಗಳ ಕಡೆಯಿಂದ ರಾಮನ ವಿಗ್ರಹ್ಕಾಗಿ ವಾದ ಮುಂದುವರಿಸುತ್ತಿರುವ ಸಿ ಎಸ್ ವೈದ್ಯನಾಥನ್ರೊಂದಿಗೆ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷತೆಯ ಐವರು ಸದಸ್ಯರ ಪೀಠದ ಇಬ್ಬರು ನ್ಯಾಯವಾದಿಗಳು ಈ ಅಗತ್ಯವನ್ನು ಮುಂದಿಟ್ಟಿದ್ದಾರೆ.
ಕಳೆದ ಎರಡು ಸಹಸ್ರಾಬ್ದದಲ್ಲಿ ವಿವಿಧ ನಾಗರಿಕತೆಗಳು ನದೀ ತಟಗಳಲ್ಲಿ ವಾಸಿಸಿ ವಾಸಸ್ಥಳವನ್ನು ಬದಲಾಯಿಸುತ್ತಾ ಬಂದಿದ್ದವು ಎಂದು ಜಸ್ಟಿಸ್ ಡಿ ವೈ ಚಂದ್ರಚೂಡರು ವೈದ್ಯನಾಥರಿಗೆ ನೆನಪಿಸಿದರು. ಹಿಂದೆಯೇ ಇರುತ್ತಿದ್ದ ಕಟ್ಟಡಗಳಲ್ಲಿ ಹಲವು ನಾಗರಿಕತೆಗಳು ಬಳಿಕ ವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದವು. ಆದ್ದರಿಂದ ಧ್ವಂಸವಾದ ಮಂದಿರದ ಅವಶೇಷಗಳ ಮೇಲೆಯೇ ಬಾಬರಿ ಮಸೀದಿಯನ್ನು ಕಟ್ಟಲಾಗಿದೆ ಎನ್ನುವ ವಾದಕ್ಕೆ ಪುರಾವೆ ಬೇಕಾಗಿದೆ ಎಂದು ಜಸ್ಟಿಸ್ ಡಿ ವೈ ಚಂದ್ರ ಚೂಡರು ಹೇಳಿದರು. ಬಾಬರಿ ಮಸೀದಿ ಇರುವ ಕಟ್ಟಡ ಮಂದಿರವಾಗಿತ್ತು ಮತ್ತು ಅದು ಶ್ರೀರಾಮನದ್ದಾಗಿತ್ತು ಎಂದು ಸಾಬೀತುಪಡಿಸುವುದು ಅಗತ್ಯವಿದೆ ಎಂದು ಜಸ್ಟಿಸ್ ಎಸ್ ಐ ಬೊಬ್ಡೆ ವೈದ್ಯನಾಥರಿಗೆ ಹೇಳಿದರು.
ಕ್ರಿಸ್ತಪೂರ್ವ ಎರಡನೆ ಶತಮಾನದಲ್ಲಿತ್ತು ಎನ್ನಲಾದ ಪಂಚಾಂಗವನ್ನು ಬಾಬರಿ ಮಸೀದಿ ಕಟ್ಟಡದಿಂದ ಪ್ರಾಚ್ಯವಸ್ತು ಇಲಾಖೆ ಪತ್ತೆಹಚ್ಚಿದೆ ಎಂದು ವೈದ್ಯನಾಥನ್ ಈ ಸಂದರ್ಭದಲ್ಲಿ ಪೀಠದ ಗಮನಕ್ಕೆ ತಂದರು. ಕುಸುರಿ ಕೆಲಸವಿರುವ ಕಂಭಗಳನ್ನು ಕಾಲಗಣನೆಯ ಸಾಕ್ಷ್ಯವಾಗಿ ಪ್ರಾಚ್ಯವಸ್ತು ಇಲಾಖೆ ಅಂಗೀಕರಿಸಿದೆ. ಬಾಬರಿ ಮಸೀದಿ ಕೆಡವುವ ಮೊದಲು ನಡೆಸಲಾದ ಶೋಧನೆಯಲ್ಲಿ ಶಿಲ್ಪಗಳ ರೂಪಗಳ ಚಿತ್ರಗಳು ಇದ್ದುದನ್ನು ವೈದ್ಯನಾಥನ್ ಸುಪ್ರೀಂಕೋರ್ಟಿಗೆ ಸಲ್ಲಿಸಿದರು. ಅಲ್ಲಿ ಕಂಡು ಬಂದ ಚಿತ್ರಗಳು ಮತ್ತು ಶಿಲ್ಪಗಳು ಇಸ್ಲಾಮೀ ಪರಂಪರೆಗೆ ಸಂಬಂಧವನ್ನು ಹೊಂದಿದ್ದಲ್ಲ ಎಂದು ಅವರು ವಾದಿಸಿದರು.
ಮಸೀದಿಯ ಒಳಗೆ ಮನುಷ್ಯರು ಮತ್ತು ಪ್ರಾಣಿಗಳ ಚಿತ್ರಗಳಿರುವುದಿಲ್ಲ. ಬಾಬರಿ ಮಸೀದಿ ಕಟ್ಟಡದಲ್ಲಿ ಇವಿದ್ದವು . ಅದು ಮಸೀದಿಯಲ್ಲ ಅನ್ನುವುದಕ್ಕೆ ಇದು ಅಧಾರವಾಗಿದೆ. ಆದ್ದರಿಂದ ಮುಸ್ಲಿಮರು ಪ್ರಾರ್ಥನೆ ನಡೆಸುತ್ತಿದ್ದರು ಎನ್ನುವ ಕಾರಣದಿಂದ ಮಾತ್ರ ಮುಸ್ಲಿಮರಿಗೆ ಆ ಕಟ್ಟಡದ ಮಾಲಕತ್ವ ಹಕ್ಕು ನೀಡಲಾಗದು. ಒಂದು ಬೀದಿಯಲ್ಲಿ ನಮಾಝ್ ಮಾಡಿದರೆ ಆ ಬೀದಿ ಮಸೀದಿಯಾಗುವುದಿಲ್ಲ. ಬಾಬರಿಯಲ್ಲಿ ಶೋಧನೆಯ ವೇಳೆ ಮುಸ್ಲಿಂ ಕಲಾರೂಪಗಳು ಕಂಡು ಬಂದಿಲ್ಲ ಎಂದು ಅವರು ವಾದಿಸಿದರು.












