ಆಝಾನ್‌ಗೆ ಅಡ್ಡಿಪಡಿಸುವುದು ಅಸಹಿಷ್ಣುತೆಯ ಪರಮಾವಧಿ: ಜಂಹಿಯ್ಯತ್ತುಲ್ ಖುತಬಾ

0
243

ಸನ್ಮಾರ್ಗ ವಾರ್ತೆ

ಮಂಗಳೂರು: ಇತ್ತೀಚೆಗೆ ಸಮುದಾಯಗಳ ಮಧ್ಯೆ ದ್ವೇಷ ಬಿತ್ತುವ ನೀಚ ಕೆಲಸದಲ್ಲಿ ತೊಡಗಿಸಿ ಕೊಂಡ ಕೆಲವೇ ಕೆಲವು ವ್ಯಕ್ತಿಗಳಿಗೆ ಸೇರಿದ ಮತೀಯ ಸಂಘಟನೆಯ ಒತ್ತಡಕ್ಕೆ ಮಣಿದು ಮಸೀದಿಗಳಿಂದ ಮೊಳಗುವ ಕೇವಲ ಒಂದು ನಿಮಿಷದ ಆಝಾನ್‌ಗೆ ಅಡ್ಡಿಪಡಿಸಲು ಸರಕಾರ ಮುಂದಾಗುತ್ತಿರುವುದು ಖೇದಕರವಾಗಿದ್ದು ಇದು ಅಸಹಿಷ್ಣುತೆಯ ಪರಮಾವಧಿಯಾಗಿದೆ ಎಂದು ಸಮಸ್ತ ಜಂಇಯ್ಯತುಲ್ ಖುತಬಾ ಜಿಲ್ಲಾ ಸಮಿತಿಯು ಅಭಿಪ್ರಾಯ ಪಟ್ಟಿದೆ.

ಇಂತಹ ಅನುಕ್ರಮಗಳಿಂದ ದೇಶದ ಹಿತಾಸಕ್ತಿಗೆ ಜಾಗತಿಕ ಮಟ್ಟದಲ್ಲಿ ಹಾನಿಯಾಗಲಿದ್ದು ದೇಶ ಈ ತನಕ ಕಾಯ್ದುಕೊಂಡು ಬಂದ ಸಹಿಷ್ಣತೆಯ ಪರಂಪರೆಗೆ ಇದು ದಕ್ಕೆ ತರಲಿದೆ. ಸರಕಾರದ ಇಂತಹ ಉಪಕ್ರಮಗಳು ಮತೀಯ ದುಷ್ಟ ಶಕ್ತಿಗಳಿಗೆ ಏಣಿ ಇಟ್ಟು ಕೊಡುವಂತಾಗಿದ್ದು ದೇಶದಲ್ಲಿ ಅರಾಜಕತೆಗೆ ಆಸ್ಪದ ಕೊಟ್ಟಂತಾಗಲಿದೆ ಎಂದು ಸಮಿತಿಯು ಅಭಿಪ್ರಾಯಿಸಿದೆ.

ಮಸೀದಿಯಿಂದ ಮೊಳಗುವ ಆಝಾನ್ ಶಬ್ದವನ್ನು ಈ ತನಕ ಎಲ್ಲಾ ಸಮುದಾಯದವರೂ ಬಹಳ ಭಕ್ತಿ ಭಾವನೆಯಿಂದ ಆಲಿಸುತ್ತಾ ಬಂದಿದ್ದು, ಪ್ರಧಾನಿ ಮೋದಿ ಕೂಡಾ ಆಝಾನ್‌ ವೇಳೆ ಗೌರವ ಸೂಚಿಸಿದ ಘಟನೆಗಳು ನಡೆದಿದೆ.

ಇದೆಲ್ಲವೂ ದೇಶದ ಸಹಿಷ್ಣುತೆಯ ಭವ್ಯ ಪರಂಪರೆಯನ್ನು ಸೂಚಿಸುತ್ತದೆ‌ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅದೇ ವೇಳೆ, ಮುಸ್ಲಿಮರು ಕೂಡಾ ಮಸೀದಿಯ ಧ್ವನಿ ವರ್ಧಕಗಳನ್ನು ಬೇಕಾಬಿಟ್ಟಿ ಬಳಸದೇ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸಿ ಜಾಗೃತೆ ಪಾಲಿಸುವಂತೆಯೂ ಜಂಹಿಯಯ್ಯತ್ತುಲ್ ಖುತಬಾ ಕರೆ ನೀಡಿದೆ.

11/5/2022