ತನ್ನ ಜೇಬಿನಿಂದ ಹಣವನ್ನು ಕೊಟ್ಟು, ಆಹಾರ ಪೊಟ್ಟಣಗಳನ್ನೂ ನೀಡಿ ವಲಸೆ ಕಾರ್ಮಿಕರನ್ನು ಹೊರರಾಜ್ಯಕ್ಕೆ ಕಳುಹಿಸಿಕೊಟ್ಟ ಅಬೂಬಕರ್ ಬಾವಾ: ಮನತಟ್ಟುವ ಮಾನವೀಯತೆಯ ಕತೆ

0
706

ಸನ್ಮಾರ್ಗ ವಾರ್ತೆ

ಮುನೀರ್ ಕಾಟಿಪಳ್ಳ

ದ ಕ ಜಿಲ್ಲೆಯ ಜೋಕಟ್ಟೆಯಲ್ಲಿ ಬೀಡು ಬಿಟ್ಟಿದ್ದ ವಲಸೆ ಕಾರ್ಮಿಕರಲ್ಲಿ ಬಿಹಾರ ರಾಜ್ಯಕ್ಕೆ ಸೇರಿದವರು ಇಂದು ರೈಲಿನ ಮೂಲಕ ತಮ್ಮ ಊರುಗಳಿಗೆ ತೆರಳಿದರು. (ಜಾರ್ಖಂಡ್, ಉತ್ತರ ಪ್ರದೇಶಕ್ಕೆ ಸೇರಿದವರು ಬಾಕಿಯಾಗಿದ್ದಾರೆ) ಅವರು ಊರುಗಳಿಗೆ ತೆರಳಲು ಪೊಲೀಸರೊಂದಿಗೆ ಸೇರಿ ಕೈಜೋಡಿಸಿ ನಿರಂತರ ಪ್ರಯತ್ನ ನಡೆಸಿದ, ಅವರಿಗೆ ಊಟ, ವಸತಿ ಏರ್ಪಾಡು ಮಾಡಿದ, ಡಿವೈಎಫ್ಐ ಮಾರ್ಗದರ್ಶನದ “ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ” ಹಾಗೂ ಅದರ ಮುಖಂಡರಾದ ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ ನೇತೃತ್ವದಲ್ಲಿ ಕಾರ್ಮಿಕರಿಗೆ ಹೊಟ್ಟೆ ತುಂಬಾ ಉಣ ಬಡಿಸಿ, ಪ್ರಯಾಣದಲ್ಲಿ ಹಸಿವು ನೀಗಿಸಲು ಊಟದ ಪೊಟ್ಟಣ ಕಟ್ಟಿಕೊಟ್ಟು ಗೌರವ ಪೂರ್ವಕವಾಗಿ ಬೀಳ್ಕೊಟ್ಟರು.

ಅದರಲ್ಲೂ ವಿಶೇಷ ಏನಂದರೆ, ಇಂದು ತೆರಳಿದ ಬಿಹಾರದ ಕಾರ್ಮಿಕರಲ್ಲಿ 14 ಜನರ ಜೇಬು ಪೂರ್ಣ ಬರಿದಾಗಿತ್ತು. ರೈಲು ಪ್ರಯಾಣ ಖಾತರಿಯಾಗಿದ್ದರು, ಹಣ ಇಲ್ಲದೆ ಪ್ರಯಾಣ ರದ್ದುಗೊಳ್ಳುವ ಸ್ಥಿತಿನಿರ್ಮಾಣಗೊಂಡಿತ್ತು. ಸರಕಾರ ಉಚಿತ ಯಾನಕ್ಕೆ ಸಿದ್ದ ಇರಲಿಲ್ಲ. ಆಗ ಮತ್ತೆ ಅಸಹಾಯಕರ ನೆರವಿಗೆ ಬಂದದ್ದು ಹೋರಾಟ ಸಮಿತಿ ಮುಖಂಡ ಅಬೂಬಕ್ಕರ್ ಬಾವ. ಹದಿನಾಲ್ಕು ವಲಸೆ ಕಾರ್ಮಿಕರಿಗೂ ಧೈರ್ಯ ತುಂಬಿ ಸುಮಾರು ಹದಿನೈದು ಸಾವಿರ ರೂಪಾಯಿಗಳನ್ನು ತನ್ನ ಜೇಬಿನಿಂದ ತುಂಬಿ ಕಾರ್ಮಿಕರನ್ಬು ಆತ್ಮೀಯವಾಗಿ ಬೀಳ್ಕೊಟ್ಟರು. ಮೊನ್ನೆಯೂ ಉತ್ತರ ಭಾರತದ ಮೂಲದ ಕಾರ್ಮಿಕರು ಟಿಕೇಟಿಗೆ ದುಡ್ಡಿಲ್ಲದೆ ಹೊರದಬ್ಬಲ್ಪಟ್ಟಾಗ ಟಿಕೇಟು ಖರೀದಿಸಿ ಕೊಟ್ಟಿದ್ದರು.

ಯಾವುದೆ ಪ್ರಚಾರದ ಹುಚ್ಚಿಲ್ಲದ, ಜೋಕಟ್ಟೆಯ ಎಮ್ ಆರ್ ಪಿ ಎಲ್ ವಿರೋಧಿ ಹೋರಾಟದ ಪ್ರಬಲ ಶಕ್ತಿಯಾದ ಈ ಅಪ್ಪಟ ಮನುಷ್ಯ ಮಾಧ್ಯಮಗಳು, ಫೋಟೊ, ಪ್ರಚಾರ ಅಂದರೆ ಸ್ವಲ್ಪ ಹಿಂದೆ. ಒತ್ತಾಯ ಮಾಡಿದರೆ ಮುಜುಗರ ಪಡುತ್ತಲೆ ಮುಖ ತೋರಿಸುತ್ತಾರೆ. ವ್ಯವಸ್ಥೆ, ಸಮಾಜ ಅಮಾನವೀಯಗೊಳ್ಳುತ್ತಿರುವ ಪ್ರಸಕ್ತ ದಿನಮಾನದಲ್ಲಿ ಅಬೂಬಕ್ಕರ್ ಬಾವ ಅವರಂತಹ ಅನಕ್ಷರಸ್ಥ ಸಾಮಾನ್ಯ ಮನುಷ್ಯರು ತಮ್ಮ ಅಸಮಾನ್ಯ ನಡವಳಿಕೆಗಳಿಂದ ಮತ್ತೆ ಮತ್ತೆ ವಿಶ್ವಾಸವನ್ನು ಹುಟ್ಟಿಸುತ್ತಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.