ಟಿಪ್ಪು ಜಯಂತಿ ರದ್ದಿನ ಬಳಿಕ ಇದೀಗ ಎಸಿಬಿ ರದ್ದು: ಸಿದ್ದರಾಮಯ್ಯರಿಗೆ ಏಟಿನ ಮೇಲೆ ಏಟು

0
1076

ಬೆಂಗಳೂರು: ತಾನು ಸಿದ್ಧರಾಮಯ್ಯ ಅಲ್ಲ ಅನ್ನುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ತೋರ್ಪಡಿಸಲು ಆತುರ ತೋರುತ್ತಿರುವರೇನೋ ಎಂದು ಹೇಳುವಷ್ಟು ವೇಗವಾಗಿ ಸಿದ್ದರಾಮಯ್ಯ ಕಾಲದ ನಿರ್ಧಾರಗಳನ್ನು ರದ್ದುಗೊಳಿಸತೊಡಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಜಾರಿಗೆ ತಂದ ಟಿಪ್ಪು ಜಯಂತಿಯನ್ನು ರದ್ದು ಮಾಡಿದ ಬೆನ್ನಲ್ಲೇ ಅವರು ಜಾರಿಗೆ ತಂದಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದು ಮಾಡಲು ಸಿ ಎಂ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟ ರಚನೆ ಆದ ತಕ್ಷಣ ಸಿದ್ದರಾಮಯ್ಯ ರ ಎಸಿಬಿ ರದ್ದಾಗುವ ಸಾಧ್ಯತೆಯಿದೆ.

ಹಾಗಂತ, ಈ ನಿರ್ಧಾರ ಏಕಾಏಕಿ ನಡೆಸಿರುವುದಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಎಸಿಬಿ ರದ್ದು ಮಾಡುವುದಾಗಿ ಬಿಜೆಪಿ ಹೇಳಿತ್ತು. ಆದ್ದರಿಂದ, ಪ್ರಣಾಳಿಕೆಯ ಹೆಸರಲ್ಲಿ ಎಸಿಬಿ ರದ್ದು ಮಾಡಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಇದೆ.

ಎಸಿಬಿಗೆ ಸರಿ ಸುಮಾರು ಮೂರು ವರ್ಷ ಆಯಿತು. 2016ರಲ್ಲಿ ಸಿದ್ದರಾಮಯ್ಯ ಎಸಿಬಿ ರಚನೆ ಮಾಡಿದ್ದರು. ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯಾಚರಿಸುವ ಈ ಇಲಾಖೆಯ ರಚನೆಯ ಬಗ್ಗೆ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಸರ್ಕಾರದ ಅಧೀನದಲ್ಲಿ ಇರುವ ಸಂಸ್ಥೆಯು ಎಷ್ಟು ಸಮರ್ಪಕವಾಗಿ ತನಿಖೆ ನಡೆಸಲು ಸಾಧ್ಯ ಎಂಬ ಆಕ್ಷೇಪ ಆಗ ವ್ಯಕ್ತವಾಗಿತ್ತು.