ರಸ್ತೆ ಅಪಘಾತ: ‘ಬಚ್‌ಪನ್‌ ಕಾ ಪ್ಯಾರ್‌’ ವಿಡಿಯೋ ಖ್ಯಾತಿಯ ಬಾಲಕ ಸಹದೇವ್‌ ಗೆ ತೀವ್ರ ಗಾಯ

0
432

ಸನ್ಮಾರ್ಗ ವಾರ್ತೆ

ರಾಂಚಿ: ಶಾಲಾ ಸಮವಸ್ತ್ರದಲ್ಲಿ ‘ಬಚ್‌ಪನ್‌ ಕಾ ಪ್ಯಾರ್‌’ ವೀಡಿಯೊ ಮೂಲಕ ದೇಶಾದ್ಯಂತ ಪ್ರಖ್ಯಾತಿ ಪಡೆದಿದ್ದ ಬಾಲಕ ಸಹದೇವ್‌ ದಿರಾಡೊ ಮಂಗಳವಾರ ರಾತ್ರಿ ಛತ್ತೀಸ್ ಗಢದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಛತ್ತೀಸ್ ಗಢದ ಸುಕ್ಕಾ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ತಂದೆಯ ಜತೆಗೆ ಸಹದೇವ್ ಮೋಟರ್ ಸೈಕಲ್‌ನಲ್ಲಿ ತನ್ನ ಗ್ರಾಮಕ್ಕೆ ಹೋಗುತ್ತಿದ್ದಾಗ ಈ ಅಪಘಾತ ನಡೆದಿದೆ. ಮೋಟರ್ ಸೈಕಲ್‌ನಿಂದ ಬಿದ್ದ ಸಹದೇವ್‌ ರವರ ತಲೆಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ತಕ್ಷಣವೇ ಸಹದೇವ್ ನನ್ನು ಜಿಲ್ಲಾ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಜಗದಾಳಪುರ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ತಲೆಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ವೈದ್ಯಾಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಸುಷ್ಮಾ ಜಿಲ್ಲಾಧಿಕಾರಿ ವಿನೀತ್ ನಂದನವಾರ್ ಮತ್ತು ಎಸ್ಟಿ ಸುನೀನ್ ಶರ್ಮಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿದರು. ಕೊಂಟಾ ಶಾಸಕ ಕವಾಸಿ ಲಖ್ಮಾ ಅವರು ಸಹದೇವ್ ಅವರಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.