ಬಿಜೆಪಿಗೆ ಸೇವೆಯ ಸಂಸ್ಕೃತಿಯೇ ಇಲ್ಲ- ಅಖಿಲೇಶ್ ಯಾದವ್

0
444

ಸನ್ಮಾರ್ಗ ವಾರ್ತೆ-

ಲಕ್ನೊ, ಡಿ. 26: ಬಿಜೆಪಿ ಘೋಷಿಸಿರುವ ಉತ್ತಮ ರಸ್ತೆ, ಚಿಕಿತ್ಸೆ, ಸಾರಿಗೆ ಇವೆಲ್ಲ ಎಲ್ಲಿವೆ? ರೈತರು, ಯುವಕರ ಜೀವನದಲ್ಲಿ ಅಂಧಕಾರ ಆವರಿಸಿದೆ. ಈ ಸರಕಾರ ಭ್ರಮೆಯನ್ನು ಹರಡಿಸಿ ಜನರನ್ನು ವಂಚಿಸಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದರು.

ಅವರಿಗೆ ಸೇವೆಯ ಸಂಸ್ಕೃತಿಯೇ ಇಲ್ಲ. ಜನರು ಕಷ್ಟದಲ್ಲಿ ಸಿಲುಕಿದ್ದಾರೆ. ಒಳ್ಳೆಯ ಆಡಳಿತವೆಂದರೆ ಸರಕಾರ ಜನರ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವುದಲ್ಲ. ಆದರೆ ಇಲ್ಲಿ ದಮನಕಾರ್ಯ ನಡೆಯುತ್ತಿದೆ. ಬಿಜೆಪಿ ಸ್ವತಃ ಜನರಿಗೆ ಸಮಸ್ಯೆಯಾಗಿದೆ. 2020ಕ್ಕೆ ಅಭೂತಪೂರ್ವ ಸಾಧನೆಯೊಂದಿಗೆ ಆತ್ಮವಿಶ್ವಾಸದೊಂದಿಗೆ ಭಾರತ ಕಾಲಿಡುತ್ತಿದೆ ಎನ್ನುತ್ತಾರೆ ಪ್ರಧಾನಿ. ಆದರೆ ಅರ್ಥವ್ಯವಸ್ಥೆಯಲ್ಲಿ ಮಾಂದ್ಯ, ರೈತರ ಆತ್ಮಹತ್ಯೆ ನಡೆಯುತ್ತಲೇ ಇದೆ. ಅವರ ಹೇಳಿಕೆ ನಿಜವಲ್ಲ. ಅವರು 2022ಕ್ಕಾಗುವಾಗ ರೈತರ ಆದಾಯ ದುಪ್ಪಟ್ಟು ಆಗುತ್ತಿದೆ ಎನ್ನುತ್ತಿದ್ದಾರೆ. ಅದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅಖಿಲೇಶ್ ಯಾದವ್ ಬೆಲೆಯೇರಿಕೆ ಗಗನ ಚುಂಬಿಸಿದೆ. ನಿರುದ್ಯೋಗದಿಂದ ಹಾಹಾಕಾರವೆದ್ದಿದೆ. ಹೀಗಿರುವಾಗ ಆದಾಯ ದುಪ್ಪಟ್ಟು ಹೇಗೆ ಆಗಲು ಸಾಧ್ಯ? ಬಿಜೆಪಿಯ ಸವಾಲನ್ನು ಜನರು ಎದುರಿಸಿ ನಿಂತಿದ್ದಾರೆ. ಇನ್ನು ಉತ್ತರ ಪ್ರದೇಶದ ಜನರು ಕೂಡ ಬಿಜೆಪಿಯ ವಂಚನೆಗೆ ಉತ್ತರ ನೀಡಬೇಕು ಎಂದು ಅಖಿಲೇಶ್ ಹೇಳಿದರು.

ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುವವರಿಗೆ ಉತ್ತರ ನೀಡಲು ಜನರು ಸಿದ್ಧರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಎರಡೂವರೆ ವರ್ಷದಲ್ಲಿ ಯಾವುದೇ ಜನಸೇವೆ ಕಾರ್ಯ ನಡೆದಿಲ್ಲ. ಇನ್ನೊಬ್ಬರ ಕೆಲಸವನ್ನು ತನ್ನದೆಂದು ಹೇಳುವುದನ್ನು ಬಿಜೆಪಿ ತೊರೆಯಬೇಕು. ಜನರೇ ಬಿಜೆಪಿಗೆ ಉತ್ತರ ನೀಡಲಿದ್ದಾರೆಂದು ಅಖಿಲೇಶ್ ಯಾದವ್ ಹೇಳಿದರು.