ಶೈಕ್ಷಣಿಕ ಕ್ರಾಂತಿ ಮೂಲಕ ಮಂಜನಾಡಿಗೆ ಕೀರ್ತಿ ತಂದ, ಅಲ್ ಮದೀನಾ ರೂವಾರಿ ಅಬ್ಬಾಸ್ ಮುಸ್ಲಿಯಾರ್ ನಿಧನ

0
814

ಸನ್ಮಾರ್ಗ ವಾರ್ತೆ-

ಮಂಗಳೂರು, ಜು.29: ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಸ್ಥಾಪಕ, ಹಿರಿಯ ಧಾರ್ಮಿಕ ವಿದ್ವಾಂಸ, ಶಿಕ್ಷಣ ಸಂಸ್ಥೆಯ ಸ್ಥಾಪಕ ಅಲ್‌ ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ (73) ಅಲ್ಪ ಕಾಲದ ಅಸೌಖ್ಯದಿಂದ ಇಂದು (ಜು. 29) ನಿಧನರಾಗಿದರು.

ಹಾಕತ್ತೂರಿನಲ್ಲಿ ಅಹ್ಮದ್ ಮುಸ್ಲಿಯಾರ್ ಅವರಿಂದ ಮದ್ರಸ ಕಲಿಕೆ ಆರಂಭಿಸಿದ ಅವರು 1957ರಲ್ಲಿ ಕೊಡಂಗೇರಿಯಲ್ಲಿ ದರ್ಸ್‌ ಗೆ ಸೇರ್ಪಡೆಗೊಂಡು ಕೆ.ಸಿ.ಅಬ್ದುಲ್ಲಾ ಕುಟ್ಟಿ ಮುಸ್ಲಿಯಾರ್‌ ರಿಂದ ಕಲಿಕೆ ಮುಂದುವರಿಸಿದರು. ಬಳಿಕ ಕೇರಳದ ತಿರುಮಟ್ಟೂರಿನಲ್ಲಿ ದರ್ಸ್ ವಿದ್ಯಾಭ್ಯಾಸ ಮುಂದುವರಿಸಿದರು. 1965ರಲ್ಲಿ ‘ಉಳ್ಳಾಲದ ಸೈಯದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್‌ರ ಬಳಿ ದರ್ಸ್ ಕಲಿಯುವ ಅಪೂರ್ವ ಅವಕಾಶ ಅವರಿಗೆ ಒದಗಿ ಬಂತು. ಬಳಿಕ ಪ್ರಸಿದ್ಧ ವಿದ್ಯಾಸಂಸ್ಥೆಯಾದ ದೇವ್‌ ಬಂದ್‌ ಕಾಲೇಜಿನಲ್ಲಿ ಸೇರ್ಪಡೆಗೊಂಡರು.

ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಾಕತ್ತೂರು ಎಂಬಲ್ಲಿ. ಇಸವಿ 1946ರ ಜನವರಿ 1. ಹೆತ್ತವರು- ಮುಹಮ್ಮದ್ ಕುಂಞಿ-ಬೀಫಾತಿಮಾ ಹಜ್ಜುಮ್ಮ. 1968ರಲ್ಲಿ ದೇವಬಂದ್ ನಿಂದ ಊರಿಗೆ ಮರಳಿ ಬಂದರು ಮತ್ತು 1969ರಲ್ಲಿ ದೇಲಂಪಾಡಿ ಮಸೀದಿಯಲ್ಲಿ ಮುದರ್ರಿಸ್ ಆಗಿ ಆಗಿ ಸೇವೆ ಸಲ್ಲಿಸಿದರು. ನಂತರ ಉಜಿರೆಯಲ್ಲಿ ಮುದರ್ರಿಸ್ ಆಗಿ ಕೆಲಸ ಮಾಡಿದರು.ನಂತರ ಅವರ ಬದುಕು ತಿರುವನ್ನುಪಡೆದುಕೊಂಡಿತು. 1975ರಲ್ಲಿ ಮಂಜನಾಡಿ ಸೇರಿಕೊಂಡರು. ಅಲ್ಲಾಡಿ ದೀರ್ಘ 21 ವರ್ಷ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದರು. ೧979ರಲ್ಲಿ ಹಡಗಿನಲ್ಲಿ ಹಜ್ ಯಾತ್ರೆ ಮಾಡಿದ್ದು ವಿಶೇಷ. ಈ ದಂಪತಿಗೆ 5 ಗಂಡು ಮತ್ತು 3 ಹೆಣ್ಮಕ್ಕಳಿದ್ದಾರೆ.

ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಮುಶಾವರದ ಸದಸ್ಯ, ಕೊಡಗು ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ, ಕರ್ನಾಟಕ ಸುನ್ನಿ ಜಂ ಇಯ್ಯತುಲ್ ಉಲಮಾದ ಕೋಶಾಧಿಕಾರಿ, ಸುನ್ನಿ ಕೋ ಆರ್ಡಿನೇಶನ್‌ನ ಅಧ್ಯಕ್ಷ, ಮುಡಿಪು-ದೇರಳಕಟ್ಟೆ ಸಂಯುಕ್ತ ಜಮಾಅತ್‌ನ ಸಹಾಯಕ ಖಾಝಿ ಆದರಲ್ಲದೆ,

ಮಂಗಳೂರು ತಾಲೂಕಿನ ಮಂಜನಾಡಿಯಲ್ಲಿ 1994ರಲ್ಲಿ ‘ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌’ ಸ್ಥಾಪಿಸಿದರು. ವಿಶೇಷ ಏನೆಂದರೆ, ಈ ಸಂಸ್ಥೆಯ ಆರಂಭ ಕೇವಲ 11 ಅನಾಥ ಮಕ್ಕಳು ಮತ್ತು ಒಬ್ಬ ಸಹಾಯಕ ಮೌಲವಿಯೊಂದಿಗೆ ಸ್ಥಾಪಿಸಲ್ಪಟ್ಟಿತ್ತು. ಅಂದಿನಿಂದ ಈ ಶಿಕ್ಷಣ ಸಂಸ್ಥೆಯು ಇತ್ತೀಚೆಗೆ ಬೆಳ್ಳಿ ಹಬ್ಬ ಆಚರಿರಿಸಿತು. ಇವತ್ತು ಈ ಸಂಸ್ಥೆಯು ಸುಮಾರು ಈ ಸಂಸ್ಥೆಯ 3,500ಕ್ಕೂ ಅಧಿಕ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವ ರಾಜ್ಯದ ಬಹುಮುಖ್ಯ ಶಿಕ್ಷಣ ಸಂಸ್ಥೆಯಾಗಿ ಗುರುತಿಗೀಡಾಗಿದೆ. ಇದರ ಅಧೀನದಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳು ವಸತಿಯಲ್ಲಿ ತಂಗಿ ವಿದ್ಯಾರ್ಜನೆ ಮಾಡುತ್ತಿರುವರಲ್ಲದೆ, 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆರಂಭದಲ್ಲಿ ಅನಾಥ ಮಕ್ಕಳ ಉಚಿತ ಶಿಕ್ಷಣ ಮತ್ತು ಪೋಷಣೆ ಈ ಸಂಸ್ಥೆಯ ಸ್ಥಾಪನೆಯ ಉದ್ದೇಶವಾಗಿತ್ತು. ಇವತ್ತು ಈ ಸಂಸ್ಥೆಯು ದೊಡ್ಡ ಬೆಳೆದಿದೆ.

ಈ ಸಂಸ್ಥೆಯ ಅಧೀನದಲ್ಲಿ ಇವತ್ತು ಹಲವು ಅಂಗಸಂಸ್ಥೆಗಳೂ ಕಾರ್ಯಾಚರಿಸುತ್ತಿವೆ. ಕೇವಲ 1.75 ಎಕರೆ ಜಮೀನಿನಲ್ಲಿ ಆರಂಭಿಸಲಾದ ಈ ಸಂಸ್ಥೆಯು ಆ ಬಳಿಕ 20 ಎಕರೆಗೂ ಅಧಿಕ ಜಮೀನಿಗೆ ಈ ಅಲ್ ಮದೀನಾ ಶಿಕ್ಷಣ ಸಂಸ್ಥೆ ವಿಸ್ತರಿಸಿರುವುದೇ ಇದರ ಜನಪ್ರಿಯತೆಗೆ ಸಾಕ್ಷಿ. ಅಲ್ಲದೆ, ಶಿಕ್ಷಕ ಮತ್ತು ಶಿಕ್ಷಕೇತರೂ ಸೇರಿ 250ಕ್ಕೂ ಅಧಿಕ ಸಿಬ್ಬಂದಿ ವರ್ಗವೂ ಇಲ್ಲಿದೆ. ಈ ಇಡೀ ಸಾಧನೆಯ ಹಿಂದಿರುವುದು ಅಬ್ಬಾಸ್ ಮುಸ್ಲಿಯಾರ್.

ತಮ್ಮ ಹೆಸರಿನ ಬದಲು ಮಂಜನಾಡಿ ಉಸ್ತಾದ್ ಎಂಬ ಹೆಸರಲ್ಲೇ ಅವರು ಗುರುತಿಗೀಡಾಗಿರುವುದು ಅವರ ಜನಪ್ರಿಯತೆಗೆ ಸಾಕ್ಷಿ.

ಉಸ್ತಾದರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕು೦ಞ, ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಯು., ಜಿಲ್ಲಾ ಸಂಚಾಲಕ ಸಯೀದ್ ಇಸ್ಮಾಈಲ್, ಆತೂರು ಆಯಿಷಾ ಎಜುಕೇಷನಲ್ ಟ್ರಸ್ಟ್ ನ ಅಮೀನ್ ಅಹ್ಸನ್ ಮತ್ತು ಸ್ಥಾನೀಯ ಅಧ್ಯಕ್ಷ ಕೆ ಎಂ ಅಶ್ರಫ್ ಅವರು ಸಂತಾಪ ಸೂಚಿಸಿದ್ದಾರೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅಲ್ಲಾಹನು ಮೃತರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.