ಸಮಾಜದಲ್ಲಿನ ಸರ್ವ ಧರ್ಮಗಳು ಸಂಸ್ಕಾರದ ಕೇಂದ್ರಗಳಾಗಬೇಕು; ಮೂಡುಬಿದಿರೆ ಭಟ್ಟಾರಕ ಶ್ರೀಗಳು

0
428

ಸನ್ಮಾರ್ಗ ವಾರ್ತೆ

ಸಮಾಜದಲ್ಲಿನ ಸರ್ವ ಧರ್ಮಗಳು ಸಂಸ್ಕಾರದ ಕೇಂದ್ರಗಳಾಗಬೇಕು, ಇದರಿಂದ ತಾವು ಮಾಡಿದ ತಪ್ಪನ್ನು ಕ್ಷಮಿಸುವ ಮೂಲಕ ಕ್ಷಮಾಧರ್ಮವನ್ನು ಬೆಳೆಸಲು ಸಾಧ್ಯವಾಗಲಿದೆ ಎಂದು ಮೂಡುಬಿದರೆ ಜೈನ ಮಠದ ಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ಅವರಿಂದು ನಿರಂಜನ್ ಜೈನ್ ಕುದ್ಯಾಡಿ ಆಯೋಜಕತ್ವದಲ್ಲಿ ನಿರಂಜನ ಲಹರಿ ಮಾಧ್ಯಮದ ಮೂಲಕ ಏರ್ಪಡಿಸಿದ್ದ ಆನ್ಲೈನ್ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಇಂದು ಧರ್ಮಗಳು, ಸಂಸ್ಕಾರದ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮಲ್ಲಿ ದೈವತ್ವದ ಗುಣಗಳನ್ನು ಮಾನವ ಅಳವಡಿಸಿಕೊಳ್ಳಬೇಕು , ಎಲ್ಲಾ ಧರ್ಮಗಳು ಕ್ಷಮಾಪಣಾ ಮನೋಭಾವ ರೂಪಿಸಿಕೊಳ್ಳಬೇಕು ,ಇದು ಉತ್ತಮ ಕರ್ತವ್ಯ ಎಂದರು .

ಮನುಕುಲದ ಜಗತ್ತಿನಲ್ಲಿ ಶಾಂತಿ ಹರಡಬೇಕು, ಮಾನವನ ವರ್ತನೆಗಳು ಸರಿಯಾಗಬೇಕು, ಧರ್ಮಗಳು ಸಂಸ್ಕಾರದ ಕೇಂದ್ರಗಳಾಗಬೇಕು, ಮನಸ್ಸು ಸರಿ ಇದ್ದಾಗ ಧರ್ಮ ಸರಿಯಾಗಿ ಕರ್ತವ್ಯ ನಿರ್ವಹಿಸಲಿದೆ , ಅರಿಷಡ್ವರ್ಗಗಳನ್ನು ಕಳೆದುಕೊಳ್ಳುವುದು, ಜೀವನದ ಉದ್ದೇಶವಾಗಬೇಕು ಎಂದ ಭಟ್ಟಾರಕ ಶ್ರೀಗಳು, ಕೆಟ್ಟವರ್ತನೆಗಳನ್ನು ಕ್ಷಮಿಸುವುದು ಕ್ಷಮಾಧರ್ಮದ ಉದ್ದೇಶ ಎಂದರು. ತಪ್ಪುಗಳನ್ನು ಕ್ಷಮಿಸುವ ಗುಣ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು, ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಬೆಳಗಾವಿ ಜಿಲ್ಲೆ ಅಥಣಿ ಗಚ್ಚಿನ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ , ಈ ಎಲ್ಲಾ ಧರ್ಮಗಳಿಗೆ ಜೀವಸತ್ವ ಕ್ಷಮಾಧರ್ಮವಾಗಿದ್ದು ಇದು ಶಾಂತಿಗೆ ಅಡಿಪಾಯವಾಗಿದೆ, ಇದು ಧರ್ಮ ಧರ್ಮಗಳ ಜೀವಾಳವಾಗಿದೆ, ಇದರಿಂದ ಶಾಂತಿ ಕಲ್ಪಿಸಲು ಸಾಧ್ಯ , ಕ್ಷಮಾಪಣೆಗಳು ಶ್ರಮದ ಮೂಲಗಳಾಗಿದ್ದು ತೀರ್ಥಂಕರರು, ಬಾಹುಬಲಿ , ಮಹಾವೀರರು, ರಾಮ, ಕ್ರಿಸ್ತ ಜನತೆಗೆ ಶಾಂತಿ ಅಹಿಂಸೆ ಕರುಣಿಸಿದರು ಎಂದರು. ಜಗತ್ತಿನಲ್ಲಿ ಇಂದು ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ಶ್ರೀಗಳು, ಎಲ್ಲದಕ್ಕೂ ಧರ್ಮದ ಚಿಂತನೆಗಳು ಅಗತ್ಯ ಎಂದರು.

ಕೇರಳದ ತಿರುವನಂತಪುರಂ ನ ಡಾ.ಅನಿಲ್ ನಾಗನ್ ಬೌದ್ಧ ಧರ್ಮ ಕುರಿತು ಉಪನ್ಯಾಸ ನೀಡಿ ಅಷ್ಟಾಂಗ ಮಾರ್ಗ ಸಮಾಜದ ಏಳಿಗೆಗೆ ಉತ್ತಮ ಉದಾಹರಣೆಯಾಗಿದೆ ಎಂದರು. ಬೌದ್ಧ ಧರ್ಮ ಅಷ್ಟಾಂಗ ಮಾರ್ಗವು ಉತ್ತಮ ಸಮಾಜದ ಏಳಿಗೆಗಾಗಿ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಬುದ್ಧನು ಕ್ಷಮೆಯನ್ನು ಮಹತ್ತರವಾಗಿ ತನ್ನ ಶಿಷ್ಯರಿಗೆ ಬೋಧಿಸಿದನು ಹಾಗೂ ಕ್ಷಮೆಯು ಧರ್ಮದ ಅವಿಭಾಜ್ಯವಾಗಿದೆ ಎಂದು ಸಾರಿದ್ದಾರೆ ಎಂದರು.

ಕ್ರೈಸ್ತ ಧರ್ಮ ಗುರು ಮಂಗಳೂರಿನ ಫಾದರ್ ಡೆನಿಸ್ ಡೇಸಾ ಕ್ರೈಸ್ತ ಧರ್ಮ ಕುರಿತು ಉಪನ್ಯಾಸ ನೀಡಿ ಕ್ರೈಸ್ತ ಧರ್ಮ
ಪ್ರೀತಿ ಕ್ಷಮೆಗಳು ಶ್ರಮದ ಮೂಲವಾಗಿದೆ ಎಂದು ಹೇಳಿದರು. ಸೊಗಸಾದ ಕಥೆಯ ಮೂಲಕ ನಿರೂಪಣೆಗೈದು ಕ್ಷಮೆಯು ಬಾಂಧವ್ಯದ ವೃದ್ಧಿಗೆ ಸಹಕಾರಿ ಹಾಗಾಗಿ ಕ್ಷಮೆ ನಮ್ಮ ಆಭರಣವಾಗಲಿ ಎಂದರು., ಕ್ಷಮೆ ಶ್ರಮದ ಮೂಲವಾಗಿದೆ ಎಂದರು.

ಸದ್ಭಾವನ ವೇದಿಕೆ ರಾಜ್ಯ ಕಾರ್ಯದರ್ಶಿ ಮಂಗಳೂರಿನ ಮುಹಮ್ಮದ್ ಕುಂಞಿ ಮುಸ್ಲಿಂ ಧರ್ಮ ಕುರಿತು ಉಪನ್ಯಾಸ ನೀಡಿ ಬದುಕಿನಲ್ಲಿ ತಪ್ಪು ಮಾಡಿದ್ದು, ಮಾಡಿದ್ದರ ಬಗ್ಗೆ ನಿರಾಶರಾಗದೇ ಅದನ್ನು ತಿದ್ದಿಕೊಂಡು ನಡೆಯಬೇಕೆಂದರು. ಮುಸ್ಲಿಂ ಧರ್ಮ ಬದುಕಿನಲ್ಲಿ ಅನಿರೀಕ್ಷಿತವಾಗಿ ಸಂಭವಿಸಬಹುದಾದ ತಪ್ಪುಗಳಿಗಾಗಿ ನಿರಾಶರಾಗದೇ ಅದನ್ನು ತಿಳಿದುಕೊಂಡು ಸರಿಪಡಿಸಿ ಕ್ಷಮೆಯನ್ನು ಕೇಳಿ ಮುನ್ನಡೆಯುವುದು ಅತೀ ಉತ್ತಮ ಎಂದು ಹೇಳಿದರು. ದೇವರು ನಮ್ಮನ್ನು ಪ್ರೀತಿಸುತ್ತಾನೆ, ತಪ್ಪುಗಳನ್ನು ಮಾಡಿ ಪ್ರಾಯಶ್ಚಿತ್ತ ಪಟ್ಟವನನ್ನು ದೇವರು ಅತೀ ಹೆಚ್ಚು ಪ್ರೀತಿಸುತ್ತಾನೆ ಎಂದರು.

ಮಂಗಳೂರು ಇಸ್ಕಾನ್ ಸಂಸ್ಥೆಯ ಬಲಭದ್ರ ಕೃಷ್ಣದಾಸರವರು ಹಿಂದೂ ಧರ್ಮ ಕುರಿತು ಉಪನ್ಯಾಸ ನೀಡಿ ಹಿಂದೂ ಧರ್ಮದ ಕ್ಷಮಾ ಧರ್ಮದ ಉದಾತ್ತ ನೀತಿಯಿಂದ ಪರಮ ಶಾಂತಿ ಹೊಂದಲಿದೆ ಎಂದರು. ಹಿಂದೂ ಧರ್ಮದಲ್ಲಿ ಕ್ಷಮೆ ಎನ್ನುವುದು ಉದಾತ್ತವಾದ ಚಿಂತನೆ ಹಾಗೂ ಇದು ಜಗತ್ತಿನ ಅತ್ಯಂತ ಹಿತಕಾರಿಯಾದ ವಿಚಾರವಾಗಿದೆ ಎಂದು ಹೇಳಿದರು. ಕೃಷ್ಣನು ಕ್ಷಮಾಶೀಲನಾದ ಮನುಷ್ಯನು ಸರ್ವಪ್ರಿಯನಾಗುತ್ತಾನೆ ಹಾಗೂ ಕ್ಷಮೆಯು ವೀರನ ಲಕ್ಷಣವಾಗಿದೆ ಎಂದು ಹೇಳಿದರು.

ಜೈನ ಧರ್ಮ ಕುರಿತು ಧಾರವಾಡದ ನಿವೃತ್ತ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಉಪನ್ಯಾಸ ನೀಡಿ, ದಶ ಲಕ್ಷಣಗಳು , ರತ್ನತ್ರೆಯಗಳು, ಆನೇಕಾಂತವಾದವನ್ನು ಪಾಲಿಸುತ್ತಿರುವುದು ಆಗಿದೆ. ವರ್ಷದ ಹತ್ತು ದಿನಗಳಲ್ಲಿ ಪಾಲನೆ ಮಾಡುವುದಾಗಿದೆ , ಆತ್ಮಗಳಿಗೆ ಕರ್ಮಗಳು ಅಂಟಿ ಕೊಂಡಿರುತ್ತದೆ ಅದನ್ನು ತೊಳೆಯುವುದಾಗಿದೆ ಇದು ಕ್ಷಮಾಧರ್ಮವು ಆಗಿದೆ ಎಂದರು.

ಬೆಳಗಾವಿಯ ಪ್ರೇಮ ಶಾಂತಿನಾಥ ಉಪಾಧ್ಯೆ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.

ಮಂಗಳೂರು ಇಸ್ಕಾನ್ ಗುಣಕರ ರಾಮದಾಸ್ ಪ್ರಭು , ಉದ್ಯಮಿ ದೇವಕುಮಾರ್ ಕಂಬ್ಳಿ ದುಬೈ, ಉದ್ಯಮಿ ಡಾ.ರೋನಾಲ್ಡೋ ಕೊಲಾಸೋ ದುಬೈ, ಅಭಿನಂದನ್ ಬಲ್ಲೇಶ್ವರ್ ಬೆಂಗಳೂರು ಇನ್ನಿತರರು ಭಾಗವಹಿಸಿದ್ದರು.

ಸೌಮ್ಯ ಶ್ರೀಧರ್ ಜೈನ್ ಹಾಗೂ ಲಾಸ್ಯ ಜೈನ್ ಮೈಸೂರು ಪ್ರಾರ್ಥಿಸಿದರು. ಕಾರ್ಯಕ್ರಮದ ಆಯೋಜಕರಾದ ನಿರಂಜನ್ ಜೈನ್ ಕುದ್ಯಾಡಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು . ಮಂಗಳೂರಿನ ಪ್ರಿಯದರ್ಶಿನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅಳದಂಗಡಿಯ ಮಿತ್ರಸೇನ್ ಜೈನ್ ಶಾಂತಿಮಂತ್ರ ಪಠಿಸಿದರು.