ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಎಚ್1ಬಿ2 ವೀಸಾಕ್ಕೆ ಸಂಬಂಧಸಿದ ಅಮೆರಿಕ ಉಪಾಧ್ಯಕ್ಷ ಜೆಡಿ ವಾನ್ಸ್ ನೀಡಿದ ಹೇಳಿಕೆಗೆ ಭಾರತ ಕಡಕ್ಕಾಗಿ ತಿರುಗೇಟು ನೀಡಿದೆ. ಅಮೆರಿಕದ ಇತಿಹಾಸವೇ ಸಂಪೂರ್ಣವಾಗಿ ವಲಸಿಗರ ಶ್ರಮ, ಸಾಹಸ ಮತ್ತು ನಾವೀನ್ಯತೆಗಳ ಮೇಲೆ ರೂಪುಗೊಂಡಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯ ಉತ್ತರಿಸಿದೆ.
ಜೆ.ಡಿ. ವಾನ್ಸ್ ಎಚ್-1ಬಿ1 ವೀಸಾ ಮತ್ತು ವಿದೇಶಿ ಕಾರ್ಮಿಕರ ಕುರಿತಂತೆ ಅಮೆರಿಕದಲ್ಲಿ ಕೆಲಸ ಮಾಡುವ ವಿದೇಶಿ ವೃತ್ತಿಪರರನ್ನು (ವಿಶೇಷವಾಗಿ ಭಾರತೀಯ ಐಟಿ ತಜ್ಞರನ್ನು) ಕಳಂಕಿತ ಹಾಗೂ ನೋವಿನ ಇತಿಹಾಸವಿರುವ ‘ಒಪ್ಪಂದದ ಕಾರ್ಮಿಕರು’ ಎಂದು ಟೀಕಿಸಿದ್ದರು. ಭಾರತ ಇದಕ್ಕೆ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿ ಅಮೆರಿಕದ ಆರ್ಥಿಕತೆ ಮತ್ತು ತಂತ್ರಜ್ಞಾನ ವಲಯದ ಬೆಳವಣಿಗೆಗೆ ಭಾರತೀಯ ವೃತ್ತಿಪರರ ಕೊಡುಗೆ ಅನನ್ಯವಾದದ್ದು. ಆದ್ದರಿಂದ ಇಂತಹ ಅವಹೇಳನಕಾರಿ ಪದಗಳ ಬಳಕೆ ಅತ್ಯಂತ ಅನುಚಿತ ಮತ್ತು ನೋವಿನ ಸಂಗತಿಯಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿತು.
ಕೆಲವು ಕಂಪೆನಿಗಳಿಗೆ ಪರ್ಮೆನೆಂಟ್ ಲೇಬರ್ ಸರ್ಟಿಫಿಕೇಶನ್ ಯೋಜನೆಯ ಅರ್ಜಿಗಳನ್ನು ಅಮೆರಿಕ ಸರಕಾರ ಅಮಾನತುಗೊಳಿಸಿದ ಬೆನ್ನಿಗೆ ವಾನ್ಸ್ ಹೇಳಿಕೆ ಹೊರಬಂದಿತ್ತು. ಅವರ ಪ್ರಕಾರ ವಿದೇಶಿ ಕಾರ್ಮಿಕರಿಂದಾಗಿ ಅಮೆರಿಕದವರಿಗೆ ಅವಕಾಶ ಕೈತಪ್ಪುತ್ತಿದೆ. ವಿದೇಶಿ ಉದ್ಯೋಗಿಗಳನ್ನು ಫಾರಿನ್ ಇಂಡೆಂರ್ಡ್ ಸರ್ವೆಂಟ್ಸ್ , ವಿದೇಶಿ ಗುತ್ತಿಗೆ ಕಾರ್ಮಿಕರು ಎಂದು ಸಂಬೋಧಿಸಿದ್ದರು. ವಿದೇಶಿ ಉದ್ಯೋಗಿಗಳಿಂದಾಗಿ ಅಮೆರಿಕನ್ ಉದ್ಯೋಗಿಗಳ ವೇತನ ಮತ್ತು ಉದ್ಯೋಗವಕಾಶಗಳು ಇಲ್ಲದಾಗುತ್ತಿದೆ ಎಂದು ವಾನ್ಸ್ ಹೇಳುತ್ತಿದ್ದಾರೆ. ಅಮೆರಿಕದ ಉದ್ಯೋಗಿಗಳಿಗೆ ಬದಲಿಯಾಗಿ ವಿದೇಶದಿಂದ ಜನ ತರಿಸಿಕೊಳ್ಳುವ ಅವಕಾಶವಾಗಿ ಎಚ್1ಬಿ1 ವೀಸಾ ವ್ಯವಸ್ಥೆ ಪರಿವರ್ತನೆಗೊಳ್ಳಬಾರದು ಮತ್ತು ಅಮೆರಿಕದಲ್ಲಿ ಅಲಭ್ಯರಿರುವ ತಜ್ಞರನ್ನು ಮಾತ್ರ ಕರೆತರುವುದಕ್ಕೆ ಈ ವೀಸಾ ವ್ಯವಸ್ಥೆ ಇರಬೇಕೆಂದು ವಾನ್ಸ್ ಹೇಳಿದ್ದಾರೆ.












