ಪ್ರವಾದಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಯತಿ ನರಸಿಂಹಾನಂದರ ಪ್ರತಿಕೃತಿ ದಹನ; 42 ಮಂದಿಯ ಮೇಲೆ FIR

0
104

ಸನ್ಮಾರ್ಗ ವಾರ್ತೆ

ಬರೇಲಿ: ಅರ್ಚಕ ಯತಿ ನರಸಿಂಹಾನಂದರ ಪ್ರತಿಕೃತಿ ದಹಿಸಿ, ರಸ್ತೆ ತಡೆ ನಡೆಸಿದ ಆರೋಪದ ಮೇಲೆ 42 ಮಂದಿಯ ವಿರುದ್ಧ ಬರೇಲಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇತರ ಆರೋಪಿಗಳನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರವಾದಿ ಮುಹಮ್ಮದ್ ವಿರುದ್ಧ ಯತಿ ನರಸಿಂಹಾನಂದ ಅವರ ವಿವಾದಾತ್ಮಕ, ಆಕ್ಷೇಪಾರ್ಹ ಹೇಳಿಕೆಗಳ ಬಳಿಕ ಈ ಪ್ರತಿಭಟನೆ ನಡೆದಿದೆ.

ಈ ಘಟನೆ ಸಂಬಂಧಿಸಿ ಸಮೀರ್, ಫಿರ್ದೌಸ್ ಹಾಗೂ 40 ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 223 (disobedience to order duly promulgated by public servant) 285 (ಸಾರ್ವಜನಿಕ ಮಾರ್ಗ ಅಥವಾ ಸಂಚಾರದಲ್ಲಿ ಅಪಾಯ ಅಥವಾ ಅಡಚಣೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಬರೇಲಿ ಎಸ್ಪಿ (ನಗರ) ಮನುಷ್ ಪಾರಿಕ್ ಹೇಳಿದ್ದಾರೆ.

“ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಸಂಬಂಧಪಟ್ಟ ಎಲ್ಲರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದರು.

ಸೋಮವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಸ್ಥಳೀಯರ ಗುಂಪು ರಸ್ತೆಯಲ್ಲಿ ಜಮಾಯಿಸಿ, ನರಸಿಂಹಾನಂದರ ಪ್ರತಿಕೃತಿಗೆ ಬೆಂಕಿ ಹಚ್ಚಿತು. ಗುಂಪು ಪೊಲೀಸರೊಂದಿಗೆ ಘರ್ಷಣೆಗೆ ಮುಂದಾಯಿತು ಎಂದು ವರದಿಯಾಗಿದೆ.