ಹೈದರಾಬಾದ್, ಜೂ. 26: ಒಂದು ತಿಂಗಳಷ್ಟೇ ಆಗಿರುವ ಆಂಧ್ರ ಪ್ರದೇಶದ ವೈಎಸ್ ಜಗನ್ ಮೋಹನ್ ರೆಡ್ಡಿ ಸರಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಬೇಕಾಗಿಲ್ಲ. ಆಂಧ್ರದಂತೆ ಇತರ ರಾಜ್ಯಗಳು ಕೂಡ ಇದೇ ಬೇಡಿಕೆಯನ್ನು ಮುಂದಿಡಬಹುದು ಎಂದು ಕೇಂದ್ರ ಸರಕಾರ ನಿರ್ಧರಿಸಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ಲೋಕಸಭೆಗೆ ತಿಳಿಸಿದ್ದು, ಇದು ವೈಎಸ್ಆರ್ ಕಾಂಗ್ರೆಸ್ ಗೆ ಬಹುದೊಡ್ಡ ಆಘಾತವಾಗಿದೆ. ಮೋದಿ ಸರಕಾರ ಚಂದ್ರಬಾಬು ನಾಯಿಡುರಿಗಿಂತ ಭಿನ್ನ ನಿಲುವನ್ನು ತನ್ನ ಸರಕಾರದ ಮೇಲೆ ತೋರಿಸಬಹುದು ಎಂಬ ಜಗನ್ ರ ನಿರೀಕ್ಷೆ ಈ ರೀತಿ ಮುರಿದು ಬಿದ್ದಿದೆ. ಬಿಹಾರ, ಛತ್ತೀಸ್ಗಡ ರಾಜ್ಯಗಳು ಕೂಡ ವಿಶೇಷ ಸ್ಥಾನಮಾನವನ್ನು ಕೇಳಿವೆ. ಯಾವ ರಾಜ್ಯಕ್ಕೂ ವಿಶೇಷ ಸ್ಥಾನಮಾನವನ್ನು ನೀಡುವ ಚಿಂತನೆ ಸರಕಾರದಲ್ಲಿಲ್ಲ ಎಂದು ಸಚಿವೆ ತಿಳಿಸಿದರು. ಆಂಧ್ರಕ್ಕೆ ವಿಶೇಷ ಸ್ಥಾನಮಾನವನ್ನು ಪಡಕೊಳ್ಳಲು ಸಾಧ್ಯವಾಗದೆ ಹೋದುದು ಟಿಡಿಪಿ ಮತ್ತು ಚಂದ್ರಬಾಬು ನಾಯಿಡುರ ಅಸಾಮರ್ಥ್ಯ ವಾಗಿದೆ ಎಂದು ಜಗನ್ ಚುನಾವಣಾ ಪ್ರಚಾರದ ವೇಳೆ ಒತ್ತು ನೀಡಿ ವೋಟು ಕೇಳಿದ್ದರು.












