ಜನಮನ ತಿದ್ದುವ ಮೂಲಕ ಸಮುದಾಯವನ್ನು ಎಚ್ಚರಗೊಳಿಸುವುದು ಪತ್ರಿಕೆಗಳ ಕೆಲಸ: ಡಾ.ಜಿ.ಎನ್.ಉಪಾಧ್ಯ

0
710

ಮುಂಬಯಿ ವಿವಿಯಲ್ಲಿ ‘ಅನುಪಮ’ ದ 20ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ

ಸನ್ಮಾರ್ಗ ವಾರ್ತೆ

ಮುಂಬಯಿ: ಪತ್ರಿಕೆ ಎನ್ನುವುದು ಬರೆಯುವವರಿಗೆ ಒಂದು ವೇದಿಕೆ. ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಅನುಪಮ ಕನ್ನಡ ಮಾಸಿಕವು ಹಲವು ಬರಹಗಾರರನ್ನು ಬೆಳಕಿಗೆ ತಂದ ಕೌಟುಂಬಿಕ ಪತ್ರಿಕೆ.ಈ ಪತ್ರಿಕೆ ಜನಮನ ತಿದ್ದುವ ಕೆಲಸದ ಜೊತೆಗೆ ಸಮುದಾಯದ ಎಚ್ಚರವನ್ನೂ ಮಾಡುತ್ತ ಬಂದಿದೆ. ಮುಂಬೈ ವಿ.ವಿಯ ಕನ್ನಡ ವಿಭಾಗದಲ್ಲಿ ಇಂದು 20ನೇ ವರ್ಷದ ಅನುಪಮ ವಿಶೇಷಾಂಕ ಬಿಡುಗಡೆಗೊಳಿಸುವ ಅವಕಾಶ ದೊರೆತಿರುವುದಕ್ಕೆ ಅನುಪಮ ಪತ್ರಿಕಾ ಬಳಗಕ್ಕೆ ನಮ್ಮ ವಂದನೆಗಳು ಎಂದು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎನ್.ಉಪಾಧ್ಯ ನುಡಿದರು.

ಮಂಗಳೂರಿನ ಕನ್ನಡ ಮಾಸಿಕ ಅನುಪಮ ಪತ್ರಿಕೆಯ 20ನೇ ವರ್ಷದ ವಿಶೇಷಾಂಕವನ್ನು ಮಂಗಳವಾರ ಮಧ್ಯಾಹ್ನ ಮುಂಬಯಿ ವಿ.ವಿ.ಕನ್ನಡ ವಿಭಾಗದಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಉಪಾಧ್ಯರು ಬಿಡುಗಡೆಗೊಳಿಸಿ ಮಾತನಾಡಿದರು.

ಮುಂಬೈಯಲ್ಲಿ ಕನ್ನಡದ ಮೊದಲ ಪತ್ರಿಕೆಯಾದ ಹವ್ಯಕ ಸುಬೋಧದ ಮೂಲಕ ಕರ್ಕಿ ಸೂರಿ ವೆಂಕಟರಮಣ ಶಾಸ್ತ್ರಿಗಳು ಕನ್ನಡ ಪತ್ರಿಕಾ ರಂಗವನ್ನು ಮುಂಬಯಿಯಲ್ಲಿ ಬೆಳೆಸಿದವರು. ಪತ್ರಿಕೋದ್ಯಮದ ದೊಡ್ಡ ಕೆಲಸ ಅಂದರೆ ಜನಮನ ತಿದ್ದುವುದು. ಇಂದು ಪತ್ರಿಕೋದ್ಯಮಕ್ಕೆ ರಾಜಕಾರಣಿಗಳ ದೊಡ್ಡ ಗ್ರಹಣ ಬಡಿದಿದೆ. ಅದನ್ನು ಮೀರಿ ಪ್ರಾಮಾಣಿಕವಾಗಿ ಅನುಪಮದಂತಹ ಪತ್ರಿಕೆಗಳು ಕನ್ನಡದ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಉಪಾಧ್ಯರು ನುಡಿದರು.

ಎಂ.ಬಿ.ಕುಕ್ಯಾನ್ ಸಂಸ್ಮರಣೆ:

ಇದೇ ವೇದಿಕೆಯಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಮುಂಬೈಯ ಪ್ರಮುಖ ಕನ್ನಡ ಮಾಸಿಕ ಅಕ್ಷಯ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದ ಎಂ.ಬಿ. ಕುಕ್ಯಾನ್ ಅವರ ಸಂಸ್ಮರಣೆ ಕಾರ್ಯಕ್ರಮವೂ ಜರಗಿತು.
ಕುಕ್ಯಾನ್ ಬಗ್ಗೆ ಮಾತನಾಡಿದ ಡಾ. ಜಿ.ಎನ್. ಉಪಾಧ್ಯರು ಮುಂಬೈ ಕನ್ನಡಿಗರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಬಂದ ಸಾಂಸ್ಕೃತಿಕ ನೇತಾರರಾಗಿದ್ದರು ಎಂಬಿ ಕುಕ್ಯಾನ್ . ಅವರು ಮುಂಬೈ ವಿವಿಯ ಕನ್ನಡ ವಿಭಾಗದಲ್ಲಿ ಸ್ಥಾಪಿಸಿದ ಚಿನ್ನದ ಪದಕ ಶಾಶ್ವತವಾದ ಯೋಜನೆ ಅವರ ಶಿಕ್ಷಣ ಪ್ರೇಮಕ್ಕೆ ಸಾಕ್ಷಿ. ಸಮುದಾಯ, ಸಮಾಜವನ್ನು ಸರಿದಾರಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಅವರು ಬಹುವಿಧ ಸಾಹಿತ್ಯ ರಚಿಸಿದರು .ಅವರು ಶ್ರಮಸಂಸ್ಕೃತಿಯ ಹಿನ್ನೆಲೆಯಿಂದ ಬಂದಿರುವವರು ಎಂದು ಡಾ.ಜಿ.ಎನ್.ಉಪಾಧ್ಯ ನುಡಿದರು.

ಅನುಪಮ ಮಾಸಿಕದ ಆರಂಭದ ದಿನಗಳಿಂದಲೂ ಅದರ ಓದುಗನಾಗಿ ಲೇಖಕನಾಗಿ ಗುರುತಿಸಿಕೊಂಡಿರುವ ಮುಂಬಯಿಯ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆಯವರು ಪತ್ರಿಕೆಯ ಪರಿಚಯ ಮಾಡುತ್ತಾ ಅನುಪಮ ಮಾಸಿಕವನ್ನು ಇಪ್ಪತ್ತು ವರ್ಷಗಳ ಹಿಂದೆ 2000ದಲ್ಲಿ ಮಂಗಳೂರಲ್ಲಿ ಖ್ಯಾತ ಸಾಹಿತಿ ಬಿ.ಟಿ ಲಲಿತಾ ನಾಯ್ಕ್ ಅವರು ಬಿಡುಗಡೆ ಮಾಡಿದ್ದರು. ಇಪ್ಪತ್ತು ವರ್ಷಗಳಿಂದಲೂ ಅದರ ಪ್ರಧಾನ ಸಂಪಾದಕಿಯಾಗಿ ಪ್ರಗತಿಪರ ಲೇಖಕಿ ಶಹನಾಝ್ ಎಂ. ಪತ್ರಿಕೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ .ಪ್ರತೀ ತಿಂಗಳು ಅವರ ಸಂಪಾದಕೀಯ ಬರಹಗಳು ಅನುಪಮದ ಘನತೆಯನ್ನು ಹೆಚ್ಚಿಸಿದೆ. ಮುಖಪುಟದ ಲೇಖನಗಳು, ಕಥೆ-ಕವನ ,ಸ್ತ್ರೀ ಶಕ್ತಿಯನ್ನು ಬಿಂಬಿಸುವ ಲೇಖನಗಳು,ಸಾಂದರ್ಭಿಕ ವಿಶೇಷ ಲೇಖನಗಳು ಹೀಗೆ ಸಮರ್ಥ ಕೌಟುಂಬಿಕ ಪತ್ರಿಕೆಯಾಗಿ ಅನುಪಮ ಹೊರಬರುತ್ತಿದೆ. ಪ್ರಧಾನ ಸಂಪಾದಕರ ನೆರವಿಗೆ ಸಮರ್ಥ ಸಹಸಂಪಾದಕರು,ಹಾಗೂ ಸಂಪಾದಕ ಮಂಡಳಿಯೂ ಇದ್ದು, ಆರೋಗ್ಯಪೂರ್ಣ ಉತ್ತಮ ವಿಚಾರಗಳ ಪತ್ರಿಕೆಯ ಹೂರಣದಿಂದ ಅತ್ಯತ್ತಮ ಕೌಟುಂಬಿಕ ಪತ್ರಿಕೆಯಾಗಿ ತನ್ನದೇ ಆದ ಛಾಪು ಮೂಡಿಸಿದೆ. ಅನುಪಮದ 20ನೇ ವಾರ್ಷಿಕ ವಿಶೇಷಾಂಕವು ಈಗಾಗಲೇ ಮಂಗಳೂರು- ಬೆಂಗಳೂರು ಸಹಿತ ವಿವಿಧೆಡೆ ಬಿಡುಗಡೆಗೊಂಡಿದ್ದು ,ಇದೀಗ ಮುಂಬೈಯಲ್ಲಿಯೂ ಬಿಡುಗಡೆ ಗೊಳ್ಳುತ್ತಿರುವುದು ಇಲ್ಲಿನ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದರು.

ಅಕ್ಷಯ ಮಾಸಿಕದ ಸಂಪಾದಕರಾದ ಡಾ.ಈಶ್ವರ ಅಲೆವೂರು ಮಾತನಾಡಿ ಅಕ್ಷಯ ಮತ್ತು ಅನುಪಮ ಈ ಎರಡೂ ಪತ್ರಿಕೆಗಳು ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಕನ್ನಡಿಗರಿಗೆ ಅಭಿಮಾನದ ಮಾತು. ಎಂ.ಬಿ.ಕುಕ್ಯಾನ್ ರು ಮೌಲಿಕವಾದ ಸಾಹಿತ್ಯವನ್ನು ನೀಡಿದವರು. ಅವರ ಬಗ್ಗೆ ಮೂರು ಗ್ರಂಥಗಳು ಬಂದಿವೆ.ಅವರು ತುಂಬಾ ಬಡತನದಿಂದ ಮೇಲೆ ಬಂದವರು.ಆದರೆ ಸಾಹಿತ್ಯ, ಶಿಕ್ಷಣ ಪ್ರೇಮಿಯಾಗಿ ಬದುಕಿನಲ್ಲಿ ಸಂತಸ ಕಂಡರು. ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ 5 ಲಕ್ಷ ರೂಪಾಯಿಯನ್ನು ನೀಡಿ ಎಂ.ಎ.ಯಲ್ಲಿ ಪ್ರಥಮ ರ‌್ಯಾಂಕ್ ಪಡೆದವರಿಗೆ ಚಿನ್ನದ ಪದಕವನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರ ಖ್ಯಾತಿಯ ಚಿತ್ರಕಲಾವಿದ ಜಯಾ ಸಾಲಿಯಾನ್ ರಚಿಸಿದ ಎಂ.ಬಿ.ಕುಕ್ಯಾನ್ ರ ರೇಖಾಚಿತ್ರವನ್ನು ಕನ್ನಡ ವಿಭಾಗಕ್ಕೆ ಹಸ್ತಾಂತರಿಸಿದರು. ಮುಂಬಯಿ ವಿ.ವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿಯವರು ನಿರೂಪಿಸಿದರು. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ ಸಮಿತಿಯ ಶಶಿಕಲಾ ಹೆಗಡೆ ವಂದಿಸಿದರು. ವಿಭಾಗದ ಶಾಂತಲಾ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಅಕ್ಷಯ ಮಾಸಿಕದ ಮಾಜಿ ಪ್ರಧಾನ ಸಂಪಾದಕ ಎಂ.ಬಿ.ಕುಕ್ಯಾನ್ ರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.