ವಿದ್ಯಾರ್ಥಿಗಳಿಗೆ ಸಹಬಾಳ್ವೆ, ಬಾಂಧವ್ಯವನ್ನು ಶಿಕ್ಷಣ ಸಂಸ್ಥೆಗಳು ಧಾರೆ ಎರೆಯಲಿ…

0
252

ಸನ್ಮಾರ್ಗ ವಾರ್ತೆ

ಲೇಖನ: ಬಸೀರಾಬಾನು,ತರೀಕೆರೆ

ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ಸ್ಥಿತಿ ಗತಿಯ ಬಗ್ಗೆ ಅವಲೋಕನ ನಡೆಸಿದರೆ ನಮ್ಮ ಕಣ್ಣ ಮುಂದೆ ಇಂದು ಎಂತಹ ಸಮಾಜ ನಿಂತಿದೆ ಎಂಬುದನ್ನು ತಿಳಿಯಬಹುದು. ಸಮಾಜದಲ್ಲಿ ಶಾಂತಿಯುತವಾಗಿ ಶಿಕ್ಷಣವನ್ನು ನೀಡುತ್ತಿದ್ದ ಶಿಕ್ಷಣ ಸಂಸ್ಥೆಗಳು, ಸಹಬಾಳ್ವೆಯಿಂದ ಶಿಕ್ಷಣ ಗಳಿಸುತ್ತಿದ್ದ ವಿದ್ಯಾರ್ಥಿಗಳು ಇಂದು ದ್ವೇಷವನ್ನು ಹರಡುವ, ಬಾಂಧವ್ಯವನ್ನು ಒಡೆಯುವ ಸಂದೇಶವನ್ನು ನೀಡುತ್ತಿರುವುದು ಖೇದನೀಯ ಸಂಗತಿ.

‘ಹಿಜಾಬ್’ ಎಂಬ ಒಂದು ತುಂಡು ಬಟ್ಟೆಯ ನೆಪವನ್ನುವೊಡ್ಡಿ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿತಗೊಳಿಸುತ್ತಿರುವುದು ನಿಜಕ್ಕೂ ವಿಪರ್ಯಾಸ. ಹಿಜಾಬ್ ಎಂಬುದು ಮುಸ್ಲಿಮ್ ಮಹಿಳೆಯರ ಮೂಲಭೂತ ಹಕ್ಕಾಗಿದೆ ಹಾಗೂ ಅವರ ಘನತೆ, ಗೌರವವನ್ನು ರಕ್ಷಿಸುವ ಸಂಪತ್ತಾಗಿದೆ. ಹಿಜಾಬ್/ಪರ್ದಾದ ಆದೇಶವನ್ನು ಇಸ್ಲಾಮ್ ಧರ್ಮವು ನೀಡುತ್ತದೆ. ಹೆಣ್ಣಿನ ರಕ್ಷಣೆಗಾಗಿ, ಅವಳನ್ನು ದೈಹಿಕ ಶೋಷಣೆಯಿಂದ ರಕ್ಷಿಸಲು ಈ ಪರ್ದಾದ ಅವಶ್ಯಕತೆಯನ್ನು ಇಸ್ಲಾಮ್ ಧರ್ಮವು ತಿಳಿಸುತ್ತದೆ.

ಪವಿತ್ರ ಕುರ್‌ಆನ್ ನಲ್ಲಿ ಪರ್ದಾದ ಆದೇಶವನ್ನು ನೀಡಲಾಗಿದೆ, ಸೃಷ್ಟಿಕರ್ತನು ಪ್ರವಾದಿ ಮುಹಮ್ಮದ್ (ಸ) ಮೂಲಕ ಈ ಆದೇಶವನ್ನು ನೀಡಿದ್ದಾನೆ ಅದೇನೆಂದರೆ;
“ಪೈಗಂಬರರೇ, ತಮ್ಮ ಪತ್ನಿಯರೊಡನೆಯೂ, ಪುತ್ರಿಯರೊಡನೆಯೂ ಸತ್ಯವಿಶ್ವಾಸಿನಿಯರೊಡನೆಯೂ ತಮ್ಮ ಮೇಲೆ ತಮ್ಮ ಚಾದರಗಳ ಸೆರಗನ್ನು ಇಳಿಸಿಕೊಳ್ಳಬೇಕೆಂದು ಹೇಳಿಬಿಡಿರಿ, ಅವರು ಗುರುತಿಸಲ್ಪಡುವಂತಾಗಲಿಕ್ಕೂ, ಸತಾಯಿಸಲ್ಪಡದಿರಲಿಕ್ಕೂ ಇದು ಹೆಚ್ಚು ಸೂಕ್ತವಾದ ವಿಧಾನ” ( ಪವಿತ್ರ ಕುರ್ ಆನ್ ಅಧ್ಯಾಯ 33:59)
ಎಂದು ಇದರಿಂದ ಸ್ಪಷ್ಟವಾಗುತ್ತದೆ ಹಿಜಾಬ್/ಪರ್ದಾ ಎಂಬುದು ದೇವನ ಆದೇಶವಾಗಿದೆ ಹಾಗೂ ಹೆಣ್ಣಿನ ರಕ್ಷಣೆಗೆ ಸೂಕ್ತ ಮಾರ್ಗವೂ ಆಗಿದೆ, ವಸ್ತ್ರವನ್ನು ಕಡಿತಗೊಳಿಸುವುದು/ನಗ್ನತೆಯನ್ನು ಮೆರೆಯುವುದು ಆಧುನಿಕತೆಯ ಏಳಿಗೆ ಅಲ್ಲ ಬದಲಾಗಿ ನಮ್ಮ ಯೋಚನೆಯನ್ನು, ಮನಸ್ಥಿತಿಯನ್ನು ಉನ್ನತ ಆಲೋಚನೆಗಳ ಮೂಲಕ ತುಂಬುವುದು ಆಧುನಿಕತೆಯ ಏಳಿಗೆಯಾಗಿದೆ.

ಹಿಜಾಬ್‌ನೊಂದಿಗೆ ಶಿಕ್ಷಣ ಪಡೆಯುವುದು ಮುಸ್ಲಿಮ್ ಹೆಣ್ಣು ಮಕ್ಕಳ ಮೂಲಭೂತ ಹಕ್ಕಾಗಿದೆ, ಭಾರತ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯ ವಾಗಿದೆ.ಈ ಸ್ವಾತಂತ್ರ್ಯವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ, ಹಿಜಾಬ್ ನಿನ್ನೆ ಮೊನ್ನೆಯಿಂದ ಅಳವಡಿಸಿಕೊಂಡು ಬಂದಿರುವ ವಸ್ತ್ರಧಾರಣೆ ಅಲ್ಲ ಬದಲಾಗಿ ಶತಮಾನಗಳಿಂದ ಪಾಲಿಸಿಕೊಂಡು ಬಂದಿರುವುದಾಗಿದೆ.

ಆದರೆ ಪ್ರಸಕ್ತ ನಮ್ಮ ದೇಶದಲ್ಲಿ ಹಿಜಾಬ್‌ನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು.ಇದರಿಂದ ದೇಶದ ಸೌಹಾರ್ದತೆ, ಭ್ರಾತೃತ್ವ ಮನೋಭಾವಗಳನ್ನು ಕಸಿದುಕೊಳ್ಳುತ್ತಿದೆ. ನಮ್ಮ ದೇಶವು ಎಲ್ಲಾ ದೇಶಗಳಿಗಿಂತ ವಿಭಿನ್ನವಾಗಿರುವುದು ತನ್ನ ವೈವಿಧ್ಯತೆಯಿಂದಾಗಿದೆ. ಭಾರತದ ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವೇ ಇಡೀ ಲೋಕದಲ್ಲಿ ತನ್ನ ಛಾಪನ್ನು ಮೂಡಿಸಿದೆ, ಭಾರತದಂತಹ ಜಾತ್ಯಾತೀತ ರಾಷ್ಟ್ರವು ಇಂದು ಧರ್ಮದ ಹೆಸರಿನಲ್ಲಿ ತನ್ನ ಏಕತೆಯ ಗುಣವನ್ನು ಕಳೆದುಕೊಳ್ಳುತ್ತಿದೆ.

ವಿದ್ಯಾರ್ಥಿಗಳು ಸಮಾಜವನ್ನು ಕಟ್ಟುವ ಭವಿಷ್ಯದ ನಾಯಕರು. ಇಂತಹ ವಿದ್ಯಾರ್ಥಿಗಳಲ್ಲಿ, ಅವರ ಮನಸ್ಸುಗಳಲ್ಲಿ ದ್ವೇಷದ ವಿಷಬೀಜವನ್ನು ಬಿತ್ತಲಾಗುತ್ತಿದೆ. ಒಂದೇ ತರಗತಿಯಲ್ಲಿ ಪರಸ್ಪರ ಸೌಹಾರ್ದತೆಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಬೀದಿಗಿಳಿದು ಪರಸ್ಪರರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಇದನ್ನೆಲ್ಲಾ ನೋಡಿದಾಗ ನಮ್ಮ ಯುವಜನತೆ ಎಂತಹ ಸಮಾಜದ ನಿರ್ಮಾಣದೆಡೆಗೆ ಸಾಗುತ್ತಿದ್ದಾರೆ ಎಂಬ ಆತಂಕವೂ ಇದೆ.

ಪ್ರಸ್ತುತ ನಮ್ಮ ವಿದ್ಯಾರ್ಥಿ ಮಿತ್ರರು ಪರಸ್ಪರ ಸ್ನೇಹಿತರನ್ನು ಕ್ಷಮಿಸಿ, ಪರಸ್ಪರರ ಧರ್ಮದ ತಪ್ಪುಕಲ್ಪನೆಗಳನ್ನು ದೂರಮಾಡಿ ಮೊದಲಿನಂತೆಯೇ ಪ್ರೀತಿ, ಸೌಹಾರ್ದತೆಯಿಂದ ಬೆರೆಯಲು ನಮ್ಮ ಯುವ ಜನಾಂಗ ಮುಂದೆ ಬರಬೇಕಿದೆ. ಪರಸ್ಪರರ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸಿ, ಸಂವಿಧಾನವು ನೀಡಿರುವ ಹಕ್ಕನ್ನು ವಿದ್ಯಾರ್ಥಿನಿಯರಿಂದ ಕಸಿದುಕೊಳ್ಳದಂತೆ ತಮ್ಮ ಸಹಪಾಠಿಗಳ ಸಹಕಾರ ನೀಡುವ ಮನಸ್ಥಿತಿಯ ವಿದ್ಯಾರ್ಥಿಗಳು ಮುಂದೆ ಬರಬೇಕು, ಆಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ, ಪ್ರೀತಿ, ಸಹಬಾಳ್ವೆಯ, ಧಾರ್ಮಿಕ ಗೌರವವನ್ನು ಕಾಪಾಡುವ ಸಮಾಜ ಕಟ್ಟಲು ಸಾಧ್ಯ.
ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಲಿ ಎಂಬ ಆಶೆಯೊಂದಿಗೆ

ಬಸಿರಾಬಾನು,ತರೀಕೆರೆ
ರಾಜ್ಯ ಸಲಹಾ ಸಮಿತಿ ಸದಸ್ಯೆ,
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಷನ್, ಕರ್ನಾಟಕ