ಸನ್ಮಾರ್ಗ ವಾರ್ತೆ
ಹರಿಯಾಣದ ಫರೀದಾಬಾದ್ ನಲ್ಲಿ ಗೋರಕ್ಷಕ ಗೂಂಡಾಗಳು 12ನೇ ತರಗತಿಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ಗೋ ಸಾಗಾಟ ನಡೆಸುತ್ತಿದ್ದಾನೆ ಎಂದು ಅಂದುಕೊಂಡು ಈ ವಿದ್ಯಾರ್ಥಿಯನ್ನು 25 ಕಿ.ಮೀ ಚೇಸ್ ಮಾಡಿ ಆತನ ಮೇಲೆ ಗುಂಡು ಹಾರಿಸಿ ಸಾಯಿಸಿದ್ದಾರೆ.
ಈ ವಿದ್ಯಾರ್ಥಿಯ ಹೆಸರು ಆರ್ಯನ್ ಮಿಶ್ರ ಎಂದಾಗಿದ್ದು ತಾವು ತಪ್ಪಾಗಿ ಈತನನ್ನು ಸಾಯಿಸಿದ್ದಾಗಿ ಈ ಗುಂಡಾಗಳು ಇದೀಗ ಒಪ್ಪಿಕೊಂಡಿದ್ದಾರೆ. ಅವರೆಲ್ಲರನ್ನು ಬಂಧಿಸಲಾಗಿದೆ.
ಆಗಸ್ಟ್ 23ರಂದು 19 ವರ್ಷದ ಆರ್ಯನ್ ತನ್ನ ಗೆಳೆಯರಾದ ಹರ್ಷಿತ್ ಮತ್ತು ಶಂಕಯ್ ಜೊತೆ ಎಸ್ ಯು ವಿ ಕಾರಿನಲ್ಲಿ ನೂಡಲ್ಸ್ ತಿನ್ನುವುದಕ್ಕೆ ಹೊರಟಿದ್ದರು. ಬಂದಿತ ಆರೋಪಿಗಳ ಪ್ರಕಾರ ಅವರಿಗೆ ಗೋಸಾಗಾಟ ನಡೆಸಲಾಗುತ್ತಿದೆ ಅನ್ನುವ ಮಾಹಿತಿ ಸಿಕ್ಕಿತ್ತು. ಅವರು ಇದನ್ನೇ ಗೋಸಾಗಾಟದ ಕಾರು ಎಂದು ತಪ್ಪಾಗಿ ತಿಳಿದುಕೊಂಡರು. ಈ ಕಾರನ್ನು ಹಿಂಬಾಲಿಸಿದ ಈ ಆರೋಪಿಗಳು ಕಾರು ನಿಲ್ಲಿಸುವಂತೆ ಸಿಗ್ನಲ್ ನೀಡಿದರೂ ಕಾರು ನಿಲ್ಲಿಸಲಿಲ್ಲ. ಹರ್ಷಿತ್ ಕಾರನ್ನು ಡ್ರೈವ್ ಮಾಡ್ತಾ ಇದ್ದ. ಆತನ ಪಕ್ಕ ಆರ್ಯನ್ ಕುಳಿತಿದ್ದ. ಶಂಕಯ್ ಮತ್ತು ಇತರೆ ಇಬ್ಬರು ಮಹಿಳೆಯರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಹರ್ಷಿತ್ ಮತ್ತು ಶಂಕಯ್ ಈ ಹಿಂದೆ ಓರ್ವ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸಿದ್ದು ಅದೇ ವ್ಯಕ್ತಿಗಳು ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂದುಕೊಂಡ ಹರ್ಷಿತ್ ಕಾರನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿದ.
ಕಾರ್ ಟೋಲ್ ಬಳಿ ನಿಂತಾಗ ಈ ಆರೋಪಿಗಳು ಗುಂಡು ಹಾರಿಸಿದ್ದಾರೆ ಇದು ಆರ್ಯನ್ ನ ಎದೆ ಮತ್ತು ಹಣೆಗೆ ತಾಗಿದೆ.
ಪೊಲೀಸರು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ ಎಂಬವರನ್ನು ಬಂಧಿಸಿದ್ದಾರೆ.