ನೀರಿಗಾಗಿ ಅನ್ನ ಸತ್ಯಾಗ್ರಹ: ಆತಿಶಿ ಆರೋಗ್ಯದಲ್ಲಿ ಏರುಪೇರು

0
153

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.25: ಆರೋಗ್ಯ ಸ್ಥಿತಿ ಕೆಡುವ ಆತಂಕದೊಂದಿಗೆ ದಿಲ್ಲಿ ಸರಕಾರದ ಆರೋಗ್ಯ ಸಚಿವೆ ಅತಿಶಿಯವರ ಅನ್ನ ಸತ್ಯಾಗ್ರಹವು ಐದನೇ ದಿನಕ್ಕೆ ಕಾಲಿಟ್ಟಿತು.

ಅವರು ದಿಲ್ಲಿಯ ಜನರಿಗೆ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ದಿಲ್ಲಿಯಿಂದ ಏಳು ಮಂದಿ ಬಿಜೆಪಿ ಸಂಸದರು ಗೆದ್ದು ಬಂದಿದ್ದರೂ ದಿಲ್ಲಿಯ ಜನರಿಗೆ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಕೇಂದ್ರ ಸರಕಾರ ಏನೂ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಪ್ರತಿದಿನ ನೂರು ದಶಲಕ್ಷ ಗ್ಯಾಲನ್ ನೀರು ಬಿಟ್ಟು ಕೊಡಿ ಎಂದು ಅತಿಶಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇದೆ. ಹರಿಯಾಣದಲ್ಲಿ ಕೂಡ ಬಿಜೆಪಿ ಸರಕಾರ ಇದೆ.

ಸತ್ಯಾಗ್ರಹ ನಿರತ ಅತಿಶಿಯವರ ಆರೋಗ್ಯ ಕೆಟ್ಟು ಹೋದ ಕಾರಣ ಇಂದು ಬೆಳ್ಳಂಬೆಳಗ್ಗೆ ಅವರನ್ನು ಲೋಕ್ ನಾಯಕ್ ಜೈಪ್ರಕಾಶ್ ಆಸ್ಪತ್ರೆಗೆ ಸೇರಿಸಲಾಗಿದೆ. ಜೂನ್ 22 ರಂದು ದಿಲ್ಲಿಗೆ ಹರ್ಯಾಣ ಸರಕಾರ ನೀರು ಕೊಡದಿರುವುದನ್ನು ಪ್ರತಿಭಟಿಸಿ ಅತಿಶಿಯವರು ಪ್ರತಿಭಟನೆ ಶುರುಮಾಡಿದ್ದರು.

ಅತಿಶಿಯವರಿಗೆ ಈಗ ರಕ್ತದೊತ್ತಡ ಹೆಚ್ಚಾಗಿದೆ. ಸಕ್ಕರೆಯ ಅಂಶ ಕಡಿಮೆಯಾಗಿದೆ. ದೇಹದ ತೂಕ ಕಡಿಮೆ ಆಗಿದೆ. ಕೆಟೊನಿನ ಪ್ರಮಾಣ ತುಂಬ ಹೆಚ್ಚಳವಾಗಿದೆ. ಇದು ಸುದೀರ್ಘ ತೊಂದರೆಗಳನ್ನು ಉಂಟು ಮಾಡಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹರಿಯಾಣ ಸರಕಾರ ಕಳೆದ ಮೂರು ವಾರಗಳಿಂದ ಯಮುನಾ ನದಿಯಿಂದ ನೂರು ಗ್ಯಾಲನ್ ನೀರು ಕಡಿತಗೊಳಿಸಿದೆ ಎಂದು ಅತಿಶಿ ಆರೋಪಿಸಿದ್ದಾರೆ. ಇಷ್ಟು ನೀರು ಇಲ್ಲದಿದ್ದರೆ ದಿಲ್ಲಿಯ 28 ಲಕ್ಷ ಜನರಿಗೆ ನೀರು ಸಿಗುವುದು ಕಷ್ಟವಾಗಲಿದೆ. ದಿಲ್ಲಿಗೆ ನೀರು ಬರುವ ಬ್ಯಾರೇಜಿನ ಎಲ್ಲ ಶಟರ್‌ಗಳನ್ನು ಹರ್ಯಾಣ ಸರಕಾರ ಮುಚ್ಚಿದೆ.

ಇದೇ ವೇಳೆ ದಿಲ್ಲಿಯ ನಗರಕ್ಕೆ ಹೆಚ್ಚು ನೀರು ನೀಡಲು ಆಗುತ್ತದೆ ಎಂದು ಪರಿಶೀಲಿಸಲು ರವಿವಾರ ಆಮ್ ಆದ್ಮಿ ಪಾರ್ಟಿ ಪ್ರತಿನಿಧಿಗಳೊಂದಿಗೆ ಚರ್ಚೆಯಲ್ಲಿ ಹರಿಯಾಣದ ಬಿಜೆಪಿ ಸರಕಾರದ ಮುಖ್ಯ ಮಂತ್ರಿ ನಾಯಿಬ್ ಸಿಂಗ್ ಹೇಳಿದ್ದಾರೆ ಎಂದು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನ ತಿಳಿಸಿದ್ದಾರೆ.