ಸನ್ಮಾರ್ಗ ವಾರ್ತೆ
ಉತ್ತರಾಖಂಡದ ಉತ್ತರಕಾಶಿಯಲ್ಲಿ ಮುಸ್ಲಿಮರ ಅಂಗಡಿಗಳ ವಿರುದ್ಧ ದುಷ್ಕರ್ಮಿಗಳು ವ್ಯಾಪಕ ಆಕ್ರಮಣ ನಡೆಸಿರುವ ಘಟನೆ ವರದಿಯಾಗಿದೆ. ಇವರು ಸಂಘ ಪರಿವಾರದ ಸದಸ್ಯರು ಎಂದು ಹೇಳಲಾಗುತ್ತಿದೆ.
ಪ್ರತಿಭಟನೆಯೊಂದಿಗೆ ಆಗಮಿಸಿದ ಈ ದುಷ್ಕರ್ಮಿಗಳು ಮುಸ್ಲಿಮರ ಅಂಗಡಿಗಳಿಗೆ ದಾಳಿ ಮಾಡಿದ್ದಾರೆ. ಇದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.
ಲವ್ ಜಿಹಾದ್ ನ ಆರೋಪದ ಹಿನ್ನೆಲೆಯಲ್ಲಿ ಈ ಆಕ್ರಮಣ ನಡೆದಿದೆ ಎಂದು ವರದಿಯಾಗಿದೆ. ಜೂನ್ 15ರ ಒಳಗೆ ಈ ಪ್ರದೇಶದಿಂದ ಮುಸ್ಲಿಮ್ ವ್ಯಾಪಾರಿಗಳು ಹೊರಟು ಹೋಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಈಗಾಗಲೇ ಅಂತಿಮ ಗಡುವು ನೀಡಿದೆ. ಜೂನ್ 20ರಂದು ಈ ರಸ್ತೆಯನ್ನು ನಾವು ತಡೆಯುತ್ತೇವೆ ಎಂದು ಕೂಡ ಅವು ಬೆದರಿಕೆ ಹಾಕಿವೆ.
ಈ ಕುರಿತಂತೆ ಈಗಾಗಲೇ ಮುಸ್ಲಿಮರ ಅಂಗಡಿಗಳಲ್ಲಿ ಪೋಸ್ಟರ್ ಗಳನ್ನು ಅವು ಅಂಟಿಸಿವೆ. ಆ ಬಳಿಕ ಈ ಆಕ್ರಮಣ ನಡೆದಿದೆ. ಈಗಾಗಲೇ ಹಲವು ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರದೇಶದಿಂದ ಪಲಾಯನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಅಂಗಡಿಗೆ ರಕ್ಷಣೆ ನೀಡುವುದೋ ಅಥವಾ ಆಕ್ರಮಣಕಾರಿಗಳನ್ನು ತಡೆಯುವುದೋ ಯಾವುದನ್ನೂ ಪೊಲೀಸರು ಮಾಡುತ್ತಿಲ್ಲ ಎಂದು ಮುಸ್ಲಿಂ ವ್ಯಾಪಾರಿಗಳು ದೂರಿದ್ದಾರೆ.












