ಗೌರಿ ಹತ್ಯೆ ಆರೋಪಿಗಳಿಗೆ ಜಾಮೀನು; ಭವ್ಯ ಸ್ವಾಗತ ಕೋರಿದ ಹಿಂದುತ್ವ ಗುಂಪು

0
106

ಸನ್ಮಾರ್ಗ ವಾರ್ತೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪ ಹೊತ್ತಿರುವ ಇಬ್ಬರು ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಅಕ್ಟೋಬರ್ 9 ರಂದು ಜಾಮೀನು ನೀಡಿದ್ದು, ಅವರಿಗೆ ಹಿಂದುತ್ವವಾದಿ ಗುಂಪುಗಳು ಭವ್ಯ ಸ್ವಾಗತವನ್ನು ನೀಡಿವೆ.

ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದ ಪರಶುರಾಮ್ ವಾಘ್ಮೋರೆ ಮತ್ತು ಮನೋಹರ್ ಯಾದವ ಅವರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು ಅಕ್ಟೋಬರ್ 9 ರಂದು ಜಾಮೀನು ನೀಡಿದೆ. ಅಕ್ಟೋಬರ್ 11 ರಂದು ಅವರು ಔಪಚಾರಿಕವಾಗಿ ಜೈಲಿನಿಂದ ಬಿಡುಗಡೆಯಾದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಜೈಲಿನಿಂದ ಹೊರ ಬಂದ ನಂತರ ಆರೋಪಿಗಳು ವಿಜಯಪುರ ಪಟ್ಟಣದ ಕಾಳಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು, ಅವರಿಗೆ ಸಂಘ ಪರಿವಾರ ಮತ್ತು ಶ್ರೀರಾಮ ಸೇನೆ ಸದಸ್ಯರು ಹಾರ ಹಾಕಿ ಸ್ವಾಗತ ಕೋರಿದರು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

“ಇಂದು ವಿಜಯದಶಮಿ, ನಮಗೆ ಮಹತ್ವದ ದಿನ. ಗೌರಿ ಲಂಕೇಶ್ ಹತ್ಯೆಯ ಆರೋಪದಲ್ಲಿ ಆರು ವರ್ಷಗಳಿಂದ ಅನ್ಯಾಯವಾಗಿ ಜೈಲು ಪಾಲಾಗಿರುವ ಪರಶುರಾಮ್ ವಾಘ್ಮೋರೆ ಮತ್ತು ಮನೋಹರ್ ಯಾದ್ವೆ ಅವರನ್ನು ನಾವು ಸ್ವಾಗತಿಸಿದ್ದೇವೆ. ನಿಜವಾದ ಅಪರಾಧಿಗಳು ಇನ್ನೂ ಪತ್ತೆಯಾಗಿಲ್ಲ. ಆದರೆ ಈ ಇಬ್ಬರು ಹಿಂದೂ ಪರ ಕಾರ್ಯಕರ್ತರಾದುದರಿಂದ ಅವರನ್ನು ಗುರಿಯಾಗಿಸಲಾಗಿದೆ. ಅವರ ಕುಟುಂಬಗಳು ನೋವು ಅನುಭವಿಸಿವೆ. ಈ ಅನ್ಯಾಯದ ಬಗ್ಗೆ ಗಂಭೀರ ಆತ್ಮಾವಲೋಕನದ ಅಗತ್ಯವಿದೆ” ಎಂದು ಹಿಂದುತ್ವ ನಾಯಕರೊಬ್ಬರು ಹೇಳಿದ್ದಾರೆ.

ಸುಪ್ರಸಿದ್ಧ ಪತ್ರಕರ್ತೆ ಮತ್ತು ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ತಮ್ಮ ತೀಕ್ಷ್ಣ ಬರವಣಿಗೆ ಮತ್ತು ದಿಟ್ಟ ದೃಷ್ಟಿಕೋನಗಳಿಂದ ಕರ್ನಾಟಕದ ಓದುಗರ ಮನೆಮಾತಾಗಿದ್ದರು. ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನಾವರ ನಿವಾಸದಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಗೌರಿ ಹತ್ಯೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಈ ಹತ್ಯೆಯು ಬಲಪಂಥೀಯ ಹಿಂದುತ್ವ ಸಂಘಟನೆಯಾದ ಸನಾತನ ಸಂಸ್ಥೆಯ ಕೆಲವು ಸದಸ್ಯರು ನಡೆಸಿದ “ಸಂಘಟಿತ ಅಪರಾಧ ಕೃತ್ಯ” ಎಂದು ಹೇಳಲಾಗಿತ್ತು.