ಸನ್ಮಾರ್ಗ ವಾರ್ತೆ
ಅಬುಧಾಬಿ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 45 ವರ್ಷದ ಬೆಕ್ಸ್ ಕೃಷ್ಣನ್ ಎಂಬವರಿಗೆ ಮರುಜೀವವನ್ನು ಒದಗಿಸಿದ ಮಾನವೀಯ ಸುದ್ದಿ ಇದಾಗಿದೆ. ಅಬುದಾಬಿಯಲ್ಲಿ ಗಲ್ಲು ಶಿಕ್ಷೆಯನ್ನು ಎದುರು ನೋಡುತ್ತಿದ್ದ ಬೆಕ್ಸ್ ಕೃಷ್ಣನ್ ಅವರನ್ನು ಗಲ್ಲು ಕಂಬದಿಂದ ಇಳಿಸಿದ್ದು ಖ್ಯಾತ ಉದ್ಯಮಿ ಯೂಸುಫ್ ಅಲಿ.
ಅಬುದಾಬಿಯಲ್ಲಿ ಇವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಸುಡಾನ್ನ ಬಾಲಕ ಮೃತಪಟ್ಟಿದ್ದ. ಬೆಕ್ಸ್ ಕೃಷ್ಣನ್ ಕೇರಳದ ತ್ರಿಶೂರಿನವರು. ಅಪಘಾತದ ಬಳಿಕ ಇವರು ಜೈಲಲ್ಲಿ ಇದ್ದರು. ಅಪಘಾತಕ್ಕೀಡಾದ ಬಾಲಕನ ಕುಟುಂಬದೊಂದಿಗೆ ಯೂಸುಫ್ ಅಲಿ ನಿರಂತರ ಸಂಪರ್ಕದಲ್ಲಿದ್ದರು. ಆ ಬಳಿಕ ಅವರಿಗೆ ಪರಿಹಾರವಾಗಿ ಒಂದು ಕೋಟಿ ರೂಪಾಯಿಯನ್ನು ನೀಡಲು ಒಪ್ಪಿದ ಯೂಸುಫ್ ಅಲಿಯವರು ಆ ಮೂಲಕ ಕೃಷ್ಣನ್ ಅವರ ಗಲ್ಲು ಶಿಕ್ಷೆಯನ್ನು ರದ್ದುಪಡಿಸಲು ಕಾರಣವಾಗಿದ್ದಾರೆ.
2012 ಸೆಪ್ಟಂಬರ್ 7 ರಂದು ಅಬುದಾಬಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿತ್ತು. ಇವರು ಚಲಾಯಿಸುತ್ತಿದ್ದ ಕಾರು ಸುಡಾನ್ನ ಬಾಲಕನಿಗೆ ತಾಗಿದ ಪರಿಣಾಮವಾಗಿ ಆತ ಮೃತಪಟ್ಟಿದ್ದ. ರಸ್ತೆ ಪಕ್ಕ ಆಡುತ್ತಿದ್ದ ಮಕ್ಕಳ ಮೇಲೆ ಕಾರು ಏರಿಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿರುವುದರಿಂದ ಅವರಿಗೆ 2013ರಲ್ಲಿ ಗಲ್ಲು ಶಿಕ್ಷೆ ಘೋಷಿಸಲಾಗಿತ್ತು.












