ಸನ್ಮಾರ್ಗ ವಾರ್ತೆ
ಬೀದರ್, ಏಪ್ರಿಲ್ 20- ಬೀದರ್ ನ ಶಾಹೀನ್ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದು ಅವಧಿ ಮುಗಿಸಿದವರನ್ನು ಬಿಡುಗಡೆಗೊಳಿಸಲಾಗಿದ್ದು, ಭಾವಪೂರ್ಣ ಬೀಳ್ಕೊಡುಗೆ ನೀಡಲಾಯಿತು. ಸುಮಾರು 193ಮಂದಿಯನ್ನು ಈ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಅವಧಿ ಮುಗಿಸಿದವರು ಶಾಲೆಯ ಸೌಲಭ್ಯಗಳ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ಕ್ವಾರಂಟೈನ್ ನಲ್ಲಿ ಇದ್ದವರನ್ನು ಅತಿಥಿಗಳಂತೆ ಆಡಳಿತ ಸಮಿತಿಯವರು ನೋಡಿಕೊಂಡಿದ್ದು, ಯಾವುದಕ್ಕೂ ಕೊರತೆ ಬಾರದಂತೆ ಮತ್ತು ಮನೆಯ ವಾತಾವರಣ ಇರುವಂತೆ ನೋಡಿಕೊಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ತಿಂಗಳ ಹಿಂದೆ ಇದೇ ಶಾಲೆಯ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು. ಪ್ರಾಥಮಿಕ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ನಾಟಕವೊಂದರಲ್ಲಿ ಪ್ರಧಾನಿ ಮೋದಿಯವರನ್ನು ಟೀಕಿಸಲಾಗಿದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ದೂರಿದ್ದನ್ನೇ ಕಾರಣವಾಗಿಸಿಕೊಂಡು ಪುಟ್ಟ ಮಕ್ಕಳನ್ನು ನಾಲ್ಕೈದು ಬಾರಿ ಪೊಲೀಸರು ತನಿಖೆ ನಡೆಸಿದ್ದರು ಮತ್ತು ಇಡೀ ಪ್ರಕರಣ ದುರುದ್ದೇಶದಿಂದ ಕೂಡಿದೆ ಎಂದು ರಾಜ್ಯಾದ್ಯಾ೦ತ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ವಿದ್ಯಾರ್ಥಿಯ ತಾಯಿ ಮತ್ತು ಶಿಕ್ಷಕಿಯನ್ನು ಬಂಧಿಸಲಾಗಿತ್ತು. ಶಾಹೀನ್ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಅಬ್ದುಲ್ ಖದೀರ್ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಬೀದರ್ ಜಿಲ್ಲೆಯಲ್ಲಿ ಕ್ವಾರಂಟೈನ್ ಗೆ ಕಟ್ಟಡ ಬಿಟ್ಟು ಕೊಡಲು ಇತರ ಶಿಕ್ಷಣ ಸಂಸ್ಥೆಗಳು ಮುಂದೆ ಬರದೇ ಹೋದಾಗ ಶಾಹೀನ್ ಸಂಸ್ಥೆ ತನ್ನೆಲ್ಲಾ ಸೌಲಭ್ಯಗಳೊಂದಿಗೆ ಶಾಲೆಯನ್ನು ಬಿಟ್ಟು ಕೊಡಲು ಒಪ್ಪಿಕೊಂಡಿತಲ್ಲದೆ, ತನ್ನ 8
ವಾಹನಗಳನ್ನು ಜಿಲ್ಲಾಡಳಿತದ ಉಪಯೋಗಕ್ಕೆ ಮೀಸಲಿಟ್ಟಿತು. ಕ್ವಾರಂಟೈನ್ ನಲ್ಲಿರುವವರಿಗೆ ಮೂರು ಹೊತ್ತಿನ ಊಟ ಸಹಿತ ಎಲ್ಲ ಸೌಲಭ್ಯವನ್ನೂ ಉಚಿತವಾಗಿ ನೀಡಿತು. ಇದೀಗ ಕ್ವಾರಂಟೈನ್ ನಲ್ಲಿದ್ದು, ಬಿಡುಗಡೆಗೊಂಡವರು ಆ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












