ಝೂಮ್​ ಮೀಟಿಂಗ್​ನಲ್ಲೇ 900ಕ್ಕೂ ಹೆಚ್ಚು ಜನರನ್ನು ಉದ್ಯೋಗದಿಂದ ತೆಗೆಯುವ ಸುದ್ದಿ ಹೇಳಿದ ಕಂಪೆನಿಯ ಸಿಇಒ…!

0
471

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್: ಮಾರುಕಟ್ಟೆಯಲ್ಲಿನ ತಲ್ಲಣದಿಂದಾಗಿ Better.com ಎಂಬ ಕಂಪನಿಯ ಸಿಇಒ, ಭಾರತೀಯ ಮೂಲದ ಉದ್ಯಮಿ ವಿಶಾಲ್ ಗಾರ್ಗ್ ಝೂಮ್​ ಮೀಟಿಂಗ್​ನಲ್ಲೇ 900ಕ್ಕೂ ಹೆಚ್ಚು ಜನರನ್ನು ತನ್ನ ಕಂಪೆನಿಯ ಕೆಲಸದಿಂದ ತೆಗೆಯುವ ತೀರ್ಮಾನವನ್ನು ಪ್ರಕಟಿಸಿದ್ದು, ಉದ್ಯೋಗಿಗಳಿಗೆ ಆಘಾತ ನೀಡಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರುಕಟ್ಟೆಯ ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯು ಉದ್ಯೋಗಿಗಳ ಸಾಮೂಹಿಕ ವಜಾಗೊಳಿಸುವಿಕೆಗೆ ಕಾರಣಗಳಾಗಿವೆ ಎಂದು ಭಾರತೀಯ-ಅಮೆರಿಕನ್ ಸಿಇಒ ವಿಶಾಲ್ ಗಾರ್ಗ್ ಹೇಳಿದ್ದಾರೆ.

“ಇದು ನೀವು ಕೇಳಲು ಬಯಸುವ ಸುದ್ದಿಯಲ್ಲ…ನೀವು ಈ ಕರೆಯಲ್ಲಿದ್ದರೆ, ನೀವು ವಜಾಗೊಳಿಸುತ್ತಿರುವ ದುರದೃಷ್ಟಕರ ಗುಂಪಿನ ಭಾಗವಾಗಿದ್ದೀರಿ. ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗುತ್ತದೆ,” ಎಂದು ವಿಶಾಲ್ ಗಾರ್ಗ್ ಝೂಮ್ ಕರೆಯ ಕಂಪನಿಯ ಉದ್ಯೋಗಿಗಳಿಗೆ ಹೇಳಿದ್ದಾರೆ.

Better.com ನ ಉದ್ಯೋಗಿಗಳ ಪೈಕಿ ಶೇಕಡಾ 15% ದಷ್ಟು ಮಂದಿಯನ್ನು ವಜಾ ಮಾಡಿದೆ ಎಂದು ವರದಿಯಾಗಿದೆ. ಉದ್ಯೋಗಿಯೊಬ್ಬ ವಿಶಾಲ್ ಗಾರ್ಗ್ ರ ಹೇಳಿಕೆಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಬಳಿಕ ವಿಚಾರ ಹೊರಗೆ ಬಂದಿದೆ. 900 ಉದ್ಯೋಗಿಗಳ ಪೈಕಿ ಅಮೇರಿಕ ಹಾಗೂ ಭಾರತೀಯ ಉದ್ಯೋಗಿಗಳು ಕೂಡ ಸೇರಿದ್ದಾರೆ ಎಂದು ವರದಿಯಾಗಿದೆ.

ವಿಶಾಲ್ ಗಾರ್ಗ್ ರ ಈ ನಡೆಯನ್ನು ನೆಟ್ಟಿಗರು ಟೀಕಿಸಿದ್ದು, ಉದ್ಯೋಗಿಗಳನ್ನು ಝೂಮ್​ ಮೀಟಿಂಗ್​ನ ಬದಲು ಕಚೇರಿಯಲ್ಲಿ ಗೌರವಯುತವಾಗಿ ಕೆಲಸದಿಂದ ತೆಗೆಯಬಹುದಿತ್ತು. ಇದು ಸರಿಯಾದ ನಡೆಯಲ್ಲ. 900 ಉದ್ಯೋಗಿಗಳ ಕುಟುಂಬದವರ ಬಗ್ಗೆ ಏನಾದರೂ ನೆನಪಿದೆಯಾ ನಿಮಗೆ ಎಂದು ಪ್ರಶ್ನಿಸಿದ್ದಾರೆ.