ಜೈಲಿನಲ್ಲಿ ಮೂಲಭೂತ ಸೌಕರ್ಯ ವಂಚಿತ ಚಿದಂಬರಂ: ಹಕ್ಕು ರಕ್ಷಣೆಗೆ ಆಗ್ರಹಿಸಿ ಅರ್ಜಿ

0
527

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.25: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಭ್ರಷ್ಟಾಚಾರ ಆರೋಪದಡಿಯಲ್ಲಿ ತಿಹಾರ್ ಜೈಲಿನಲ್ಲಿ ಬಂಧಿಸಿಡಲಾದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂರ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಶಶಿ ತರೂರ್, ಕಾರ್ತಿ ಚಿದಂಬರಂ ಸಹಿತ ಹಿರಿಯ ಕಾಂಗ್ರೆಸ್ ನಾಯಕರು ಸೇರಿದಂತೆ 5000 ಮಂದಿ ಸಹಿ ಹಾಕಿದ ಅರ್ಜಿಯನ್ನು ಸಲ್ಲಿಸಲಾಗಿದೆ.

ಐಎನ್‍ಎಕ್ಸ್ ಪ್ರಕರಣ ಖೋಟಾ ಆಗಿದ್ದು ಚಿಂದಂಬರಂರನ್ನು ಬಂಧಿಸಿ ಒಂದು ತಿಂಗಳಾಗಿದೆ. ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಸಿಬಿಐ ಸಿದ್ಧವಾಗಿಲ್ಲ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ. ಹಿರಿಯ ಪ್ರಜೆ ಮತ್ತು ಮಾಜಿ ಕೇಂದ್ರ ಸಚಿವರಿಗೆ ಜೈಲಿನಲ್ಲಿ ಕುರ್ಚಿ ನೀಡಿಲ್ಲ. ತಲೆದಿಂಬೂ ಕೊಟ್ಟಿಲ್ಲ. ಒಂದು ಪ್ರಕರಣದ ಹೆಸರಿನಲ್ಲಿ ಮೂಲಭೂತ ಸೌಕರ್ಯಗಳನ್ನು ನಿಷೇಧಿಸುತ್ತಿರುವುದು ವಿಷಾದನೀಯ. ಊಹಾಪೋಹಗಳು, ನಿಂದನೆ ತುಂಬಿದ ಪ್ರಚಾರ ತಂತ್ರಗಳು ಕೃತಕ ಸೃಷ್ಟಿಯಾಗಿದೆ ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ.