ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.11: ಕೇರಳದ ಕೆಲವು ಮಾಧ್ಯಮಗಳು ಮತ್ತು ಅಧಿಕಾರಿಗಳು ಸೃಷ್ಟಿಸಿದ ಮಕ್ಕಳ ಸಾಗಾಟ ವಿವಾದ ಸುಳ್ಳು ಕತೆಯೆಂದು ಬಿಹಾರ ಸರಕಾರ ತಿಳಿಸಿದೆ. ಇದರೊಂದಿಗೆ ಕೇರಳದ ಯತೀಂಖಾನಗಳ ವಿರುದ್ಧ ನಡೆಸಿದ ಕ್ರಮ ಸರಿಯಲ್ಲ ಎಂದು ದೃಢವಾಗಿದೆ. ಕೇರಳದ ಯತೀಂಖಾನಗಳಲ್ಲಿ ಮಕ್ಕಳನ್ನು ಸಾಗಾಟ ಮಾಡಲಾಗಿದೆ ಎಂದು ಸಂಘಪರಿವಾರ ಸಂಘಟನೆಗಳಿಂದ ಸಿಬಿಐ ತನಿಖೆಗೆ ಬಲವಾದ ಒತ್ತಾಯ ಕೇಳಿಬಂದಿತ್ತು.ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಇದಕ್ಕಾಗಿ ದಿಲ್ಲಿಗೆ ಭೇಟಿ ನೀಡಿ ಕೇಂದ್ರ ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿಯವರನ್ನು ಸಂಪರ್ಕಿಸಿದ್ದರು.
ಆದರೆ ಬಿಜೆಪಿ, ಜನತಾದಳ ಯು, ಎಲ್ಜಿಪಿ ನೇತೃತ್ವದ ಬಿಹಾರ ಸರಕಾರ ಮಕ್ಕಳ ಸಾಗಾಟ ಪ್ರಕರಣ ನಿರಾಧಾರ ಎಂದು ಅಫಿದಾವಿತ್ನ್ನು ಕೋರ್ಟಿಗೆ ಸಲ್ಲಿಸಿದೆ. ಪಟ್ನಾದಿಂದ ಕೇರಳಕ್ಕೆ ಬಂದು ತನಿಖೆ ಮಾಡಿದಾಗ ಪೋಷಕರ ಅನುಮತಿಯಲ್ಲಿ ಎಲ್ಲ ಮಕ್ಕಳನ್ನು ಯತೀಂ ಖಾನಕ್ಕೆ ಕಳುಹಿಸಿರುವುದು ಬಯಲಾಗಿದೆ. ನಮ್ಮ ತನಿಖೆಯಲ್ಲಿ ಈ ಪ್ರಕರಣವು ಮಕ್ಕಳ ಸಾಗಾಟದಡಿಯಲ್ಲಿ ಬರುವುದಿಲ್ಲ ಎಂದು ಬಿಹಾರ ಸರಕಾರ ತಿಳಿಸಿದೆ.
ಬಾಂಗ, ಭಾಗಲ್ಪುರ, ಮಾಧೇಪುರಗಳಿಂದ 88 ಗಂಡು ಮಕ್ಕಳು 24 ಹೆಣ್ಣು ಮಕ್ಕಳು ಕೇರಳಕ್ಕೆ ಬಂದಿದ್ದು, ಇವರಲ್ಲಿ 65 ಮಕ್ಕಳು ಕೋಝಿಕ್ಕೋಡ್ ಮುಕ್ಕಂ ಮುಸ್ಲಿಂ ಆರ್ಫನೇಜ್ನಲ್ಲಿದ್ದರು. ಮಕ್ಕಳನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ ಎಂದು ತಿಳಿದು ಬಂದ ಬಳಿಕ ಪೋಷಕರು ಆರು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. 41 ಮಕ್ಕಳನ್ನು ಅವರ ಕುಟುಂಬಗಳಿಗೆ ನೀಡಲು ಪಟ್ನಾದ ಮಹಿಳಾ ಕಲ್ಯಾಣ ಸಮಿತಿ ಕರೆದುಕೊಂಡು ಹೋಗಿದೆ ಎಂದು ಅಫಿದಾವಿತ್ನಲ್ಲಿ ತಿಳಿಸಲಾಗಿದೆ. ರಜೆಯಲ್ಲಿ ಮನೆಗೆ ಬಂದು ತಾವಿರುವ ಸಂಸ್ಥೆಗಳಿಗೆ ಹೆಚ್ಚಿನ ಮಕ್ಕಳು ಮರಳುತ್ತಿದ್ದರು. ಮುಕ್ಕಂ ಆರ್ಫನೇಜ್ ಬಂದ ಮಕ್ಕಳು ಕಳೆದ ಎರಡು ವರ್ಷಗಳಿಂದ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.












