ಸನ್ಮಾರ್ಗ ವಾರ್ತೆ
ಬಿಲ್ಕಿಸ್ ಬಾನು ಪ್ರಕರಣದ ಮೂವರು ಅಪರಾಧಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಶರಣಾಗತಿಗೆ ಕಾಲಾವಕಾಶವನ್ನು ಕೋರಿದ್ದಾರೆ. ಇವರ ಶರಣಾಗತಿಗೆ ಜನವರಿ 21 ಕೊನೆಯ ದಿನಾಂಕವಾಗಿದ್ದು ಇದೀಗ ಇವರ ಹೊಸ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಕುಟುಂಬದಲ್ಲಿ ನಡೆಯಲಿರುವ ವಿವಾಹ, ವೃದ್ಧ ಹೆತ್ತವರು ಮತ್ತು ಬೆಳೆ ಕೊಯ್ಲು ಸಮಯ ಮುಂತಾದ ಕಾರಣಗಳನ್ನು ಈ ಅಪರಾಧಿಗಳು ನೀಡಿದ್ದಾರೆ.
ಗೋವಿಂದ ಬಾಯಿ ಎಂಬ ಅಪರಾಧಿ ವೃತ್ತಿಯಲ್ಲಿ ಕ್ಷೌರಿಕನಾಗಿದ್ದು ತನ್ನ 88 ವರ್ಷದ ಹಾಸಿಗೆ ಹಿಡಿದಿರುವ ತಂದೆ ಹಾಗೂ 75 ವರ್ಷದ ತಾಯಿ ಸಂಪೂರ್ಣವಾಗಿ ತನ್ನ ಮೇಲೆ ಅವಳಂಬಿತರಾಗಿದ್ದಾರೆ, ಇಬ್ಬರು ಮಕ್ಕಳ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಬೇಕಿದೆ, ತನಗೆ ಅಸ್ತಮ ಇದೆ, ಇತ್ತೀಚಿಗೆ ಶಸ್ತ್ರಕ್ರಿಯೆಗೆ ಒಳಗಾಗಿದ್ದೇನೆ. ಆದ್ದರಿಂದ ಶರಣಾಗತಿಗೆ ನಾಲ್ಕು ವಾರ ಕಾಲಾವಕಾಶ ನೀಡಿ ಎಂದು ಆತ ಕೋರಿದ್ದಾನೆ.
ಇನ್ನೊಬ್ಬ ಅಪರಾಧಿ ರಮೇಶ್ ಚಂದನ ತನ್ನ ಮಗನ ವಿವಾಹವಿದೆ ಎಂದು ಹೇಳಿ ಆರು ವಾರಗಳ ಕಾಲಾವಕಾಶವನ್ನು ಕೋರಿದ್ದಾನೆ.
ಮತ್ತೋರ್ವ ಅಪರಾಧಿ ಮಿತೇಶ್ ಭಟ್ ಎಂಬವ ಬೆಳೆ ಕೊಯ್ಲು ಸಮಯ ಎಂದು ಹೇಳಿ ಆರು ವಾರಗಳ ಕಾಲಾವಕಾಶ ಕೋರಿದ್ದಾನೆ.












