ಅರಾಜಕ ಸ್ಥಿತಿಯ ಮುನ್ನೆಚ್ಚರಿಕೆ ನೀಡುತ್ತಿರುವ ಬೆಳವಣಿಗೆಗಳು

0
45

ಸನ್ಮಾರ್ಗ ಸಂಪಾದಕೀಯ

ದೇಶದ ಭದ್ರತಾ ವ್ಯವಸ್ಥೆ ದೊಡ್ಡ ಮಟ್ಟದಲ್ಲಿ ಕುಸಿದಿರುವುದನ್ನು ಸಾಲು ಸಾಲು ಪ್ರಕರಣಗಳು ಸಾಬೀತುಪಡಿಸುತ್ತಿವೆ. ಕಳೆದ  ಒಂದು ವಾರದಲ್ಲಿ ಸುಮಾರು 100ರಷ್ಟು ವಿಮಾನಗಳಿಗೆ ಬಾಂಬ್ ಬೆದರಿಕೆಯ ಕರೆ ಬಂದಿದೆ. ರೈಲು ಹಳಿಗಳನ್ನು ತಪ್ಪಿಸುವ  ಪ್ರಕರಣಗಳು ಮತ್ತು ಅದರಿಂದಾಗಿ ಅಪಘಾತಗಳಾಗುತ್ತಿರುವ ಸುದ್ದಿಗಳು ತಿಂಗಳುಗಳಿಂದ  ವರದಿಯಾಗುತ್ತಲೇ ಇವೆ. ಇನ್ನೊಂದೆಡೆ ಲಾರೆನ್ಸ್ ಬಿಷ್ಣೋಯ್ ಎಂಬ ಘಾತುಕ ಗ್ಯಾಂಗನ್ನು ಕೇಂದ್ರ ಸರಕಾರವೇ ಪೋಷಿಸುತ್ತಿದೆಯೇನೋ ಎಂಬ ಅ ನುಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ. ಕೆನಡಾದಲ್ಲಿದ್ದ  ಖಲಿಸ್ತಾನಿ ಪರ ನಾಯಕ ನಿಜ್ಜರ್ ನನ್ನು ಹತ್ಯೆಗೈಯಲು ಕೇಂದ್ರ ಸರಕಾರ ಈತನನ್ನು ಬಳಸಿಕೊಂಡಿದೆಯೇ ಎಂಬ ಚರ್ಚೆಯೂ ನಡೆಯುತ್ತಿದೆ. ಕಳೆದ ಜೂನ್ 18ರಂದು ಹರ್ದೀಪ್ ಸಿಂಗ್ ನಿಜ್ಜರ್  ಎಂಬ ಸಿಕ್ಖ್ ಪ್ರತ್ಯೇಕತಾವಾದಿ ನಾಯಕನನ್ನು ಕೆನಡಾದಲ್ಲಿ ಹತ್ಯೆಗೈಯಲಾಗಿತ್ತು. ಈತನನ್ನು ಭಯೋತ್ಪಾದಕ ಎಂದು  2020ರಲ್ಲಿ ಭಾರತ ಘೋಷಿಸಿತ್ತು. ಭಾರತ ಸರಕಾರದ ಬೆಂಬಲದಿಂದಲೇ ಈತನನ್ನು ಹತ್ಯೆ ಮಾಡಲಾಗಿದೆ ಎಂದು ಕೆನಡಾ  ನೇರವಾಗಿ ಆರೋಪಿಸಿದೆ. ಮಾತ್ರವಲ್ಲ, ಭಾರತೀಯ ರಾಯಭಾರಿಯನ್ನು ತನಿಖಿಸಲೂ ಮುಂದಾಗಿದೆ. ಇದರ ಬೆನ್ನಿಗೇ  ಬಿಷ್ಣೋಯ್ ಗ್ಯಾಂಗ್‌ನ ಪಾತ್ರದ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ.

ಲಾರೆನ್ಸ್ ಬಿಷ್ಣೋಯ್ ಗುಜರಾತ್‌ನ ಜೈಲಿನಲ್ಲಿದ್ದಾನೆ. ಈತನನ್ನು ಜೈಲಿನಿಂದ ಹೊರಗೆ ತನಿಖೆಗಾಗಿ ಕರೆದುಕೊಂಡು  ಹೋಗದಂತೆ ಕೇಂದ್ರ ಸರಕಾರವೇ ತಡೆಯನ್ನು ವಿಧಿಸಿದೆ. ಮಹಾರಾಷ್ಟ್ರದಲ್ಲಿ ಬಾಬಾ ಸಿದ್ದೀಕಿಯನ್ನು ಇತ್ತೀಚೆಗೆ  ಹತ್ಯೆಗೈಯಲಾಯಿತು. ಈತನದೇ ಗ್ಯಾಂಗ್‌ನ ಶಾರ್ಪ್ ಶೂಟರ್‌ಗಳು ಈ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.  ಆದರೆ, ಈತನನ್ನು ತನಿಖೆಗಾಗಿ ಮುಂಬೈಗೆ ಕರೆತರುವುದಕ್ಕೆ ಸಾಧ್ಯವಾಗುತ್ತಿಲ್ಲ. ಪೊಲೀಸರು ಗುಜರಾತ್ ಜೈಲಿನಲ್ಲಿ ಮಾತ್ರ  ಈತನನ್ನು ವಿಚಾರಣೆ ನಡೆಸಬೇಕಾದ ಸ್ಥಿತಿ ಉಂಟಾಗಿದೆ. ಕೇಂದ್ರ ಸರಕಾರ ಈತನಿಗಾಗಿ ಇಂಥದ್ದೊಂದು ನಿಯಮ ಜಾರಿ  ಮಾಡಿರುವುದೇಕೆ ಎಂಬ ಪ್ರಶ್ನೆಯೂ ಇದೆ. ಇದು ಈತನನ್ನು ಕಾನೂನು ಕ್ರಮಗಳಿಂದ ರಕ್ಷಿಸುವ ದುರುದ್ದೇಶದಿಂದ  ಮಾಡಲಾದ ರಕ್ಷಣಾ ಕವಚ ಎಂಬ ಅಭಿಪ್ರಾಯವೂ ಇದೆ. ಇದರ ನಡುವೆಯೇ,

ಉತ್ತರ ಭಾರತದ ಹಲವು ಕಡೆ ಮುಸ್ಲಿಮ್ ವಿರೋಧಿ ಮತ್ತು ಪ್ರವಾದಿ ನಿಂದನೆಯ ಘಟನೆಗಳು ವರದಿಯಾಗುತ್ತಲೇ ಇವೆ.  ಉತ್ತರಾಖಂಡದ ಕಾನ್ವಾರ್ ಪ್ರದೇಶದ ವ್ಯಾಪಾರಿಗಳ ಸಂಘವು ಮುಸ್ಲಿಮರಿಗೆ ಜೀವ ಬೆದರಿಕೆ ಹಾಕಿದೆ. ಈ ವರ್ಷದ ಅಂತ್ಯಕ್ಕೆ  ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದೆ. ಮುಸ್ಲಿಮರಿಗೆ ಬಾಡಿಗೆಗೆ ಮನೆ ನೀಡಿದ ಮಾಲಕರಿಗೂ ಧಮಕಿ ಹಾಕಿದೆ.  ಮುಸ್ಲಿಮರಿಗೆ ಮನೆ ಬಾಡಿಗೆ ನೀಡಿರುವ ಮಾಲಕರು ಮುಸ್ಲಿಮರನ್ನು ಹೊರಹಾಕದಿದ್ದರೆ 10 ಸಾವಿರ ರೂಪಾಯಿ ದಂಡ  ವಿಧಿಸುವುದಾಗಿ ಬೆದರಿಕೆ ಹಾಕಿದೆ. ಇನ್ನೊಂದೆಡೆ ಯತಿ ನರಸಿಂಗಾನಂದ  ಎಂಬವರು ಸುಪ್ರೀಮ್ ಕೋರ್ಟ್ ನ  ಆದೇಶಕ್ಕೆ  ಕಿಂಚಿತ್ ಬೆಲೆಯನ್ನೂ ನೀಡದೇ ಪ್ರವಾದಿ ನಿಂದನೆ ಮತ್ತು ಮುಸ್ಲಿಮ್ ನಿಂದನೆಯನ್ನು ಮಾಡುತ್ತಲೇ ಇದ್ದಾರೆ.

ಸದ್ಯ ದೇಶದಲ್ಲಿ ದ್ವೇಷ ಭಾಷಣವೆಂಬುದು ಸಹಜ ಬೆಳವಣಿಗೆಯಾಗುತ್ತಿದೆ. ಉತ್ತರ ಪ್ರದೇಶದ ಬಹ್ರೆಚ್  ನಲ್ಲಿ ನಡೆದ  ಕೋಮುಗಲಭೆಯ ಬಳಿಕ ಆರೋಪಿ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಲಾದ ದೃಶ್ಯಗಳು ಸೋಶಿಯಲ್  ಮೀಡಿಯಾದಲ್ಲಿ ಹರಿದಾಡುತ್ತಿವೆ. ಆರೋಪಿಗಳ ಮನೆ ಧ್ವಂಸ ಮಾಡುವುದನ್ನು ಕಾನೂನುಬಾಹಿರ ಎಂದು ಸುಪ್ರೀಮ್  ಕೋರ್ಟ್ ತೀರ್ಪಿತ್ತ ಬಳಿಕ ನಡೆದಿರುವ ಈ ಘಟನೆಯು ನ್ಯಾಯಾಂಗದ ಮಹತ್ವ ಕಡಿಮೆಯಾಗುತ್ತಿರುವುದನ್ನು  ಸೂಚಿಸುವಂತಿದೆ. ಅಂದಹಾಗೆ,

ಬಾಂಬ್  ಬೆದರಿಕೆ ಎಂಬುದು ವಿಮಾನಯಾನ ಕಂಪೆನಿಗಳ ಪಾಲಿಗೆ ಅತೀ ದುಬಾರಿ ಖರ್ಚಿನ ಸಂಗತಿಯಾಗಿದೆ. ನಿಲ್ದಾಣದಿಂದ ಹೊರಟುಹೋದ ವಿಮಾನವು ಬಾಂಬ್ ಬೆಂದರಿಕೆಯ ಕಾರಣದಿಂದ ತುರ್ತು ಭೂಸ್ಪರ್ಶ ಮಾಡುವುದಕ್ಕೆ, ಅಪಾರ  ಇಂಧನವನ್ನು ಖಾಲಿ ಮಾಡಬೇಕಾಗುತ್ತದೆ. ಮುಂಬೈಯಿಂದ  ಅಮೇರಿಕಾದ ನ್ಯೂಯಾರ್ಕ್ ಗೆ  ತೆರಳುತ್ತಿದ್ದ ಎಐ117 ವಿಮಾನವು ಕಳೆದವಾರ ಬಾಂಬ್ ಬೆದರಿಕೆಯ ಕಾರಣ ತುರ್ತು ಭೂಸ್ಪರ್ಶ ಮಾಡಿತ್ತು. ಪ್ರಯಾಣಿಕರೂ ಅವರ ಲಗೇಜ್‌ಗಳೂ  ಸೇರಿದಂತೆ ಇಂಥ ವಿಮಾನಗಳ ತೂಕ 450 ಟನ್‌ನಷ್ಟಿರುತ್ತದೆ. ಅದು ತುರ್ತು ಭೂಸ್ಪರ್ಶ ಮಾಡಬೇಕೆಂದರೆ, 100 ಟನ್  ಇಂಧನವನ್ನು ಖಾಲಿ ಮಾಡಬೇಕಾಗುತ್ತದೆ. ಪ್ರತೀ ಟನ್ ಇಂಧನಕ್ಕೆ ಒಂದು ಲಕ್ಷ ರೂಪಾಯಿ ಬೆಲೆಯಿದೆ. ಕೇವಲ ಇಂಧನ  ಖರ್ಚನ್ನೇ ಲೆಕ್ಕ ಹಾಕಿದರೂ ತುರ್ತು ಭೂಸ್ಪರ್ಶದಿಂದಾಗಿ ಒಂದು ಕೋಟಿ ರೂಪಾಯಿ ನಷ್ಟವಾಗುತ್ತದೆ. ಇದಲ್ಲದೇ ವಿಮಾನವನ್ನು ತಪಾಸಿಸಬೇಕೆಂದರೆ ಅದರಲ್ಲಿರುವ ಪ್ರಯಾಣಿಕರನ್ನು ಇಳಿಸಿ ವಿವಿಧ ಹೊಟೇಲುಗಳಿಗೆ ರವಾನಿಸಬೇಕಾಗುತ್ತದೆ.  ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಅಲ್ಲದೇ, ಬೇರೆ ವಿಮಾನದ ವ್ಯವಸ್ಥೆಯನ್ನೂ  ಮಾಡಬೇಕಾಗುತ್ತದೆ. ಇವೆಲ್ಲವೂ ಸೇರಿದರೆ ಒಂದು ಬಾಂಬ್ ಬೆದರಿಕೆಯಿಂದ ವಿಮಾನಯಾನ ಸಂಸ್ಥೆಗೆ ಆಗುವ ಖರ್ಚು  ಮೂರು ಕೋಟಿಯನ್ನೂ ಮೀರಿದ್ದು ಎಂದು ಹೇಳಲಾಗುತ್ತಿದೆ. ಇದು ಒಂದು ವಿಮಾನದಿಂದಾಗುವ ನಷ್ಟ. ಹಾಗಿದ್ದರೆ 100 ವಿಮಾನಗಳಿಗೆ ಹಾಕಲಾದ ಬಾಂಬ್ ಬೆದರಿಕೆಯಿಂದ ವಿಮಾನಯಾನ ಸಂಸ್ಥೆಗೆ ಆಗಿರುವ ನಷ್ಟ ಎಷ್ಟಿರಬಹುದು? ಪದೇಪದೇ  ಇಂಥ ಬಾಂಬ್ ಬೆದರಿಕೆಯ ಕರೆ ಬರಲು ಕಾರಣವೇನು? ಕಳೆದವಾರ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  ಹಾಗೂ ಬಿ.ಎಂ.ಎಸ್. ಕಾಲೇಜುಗಳಿಗೆ ಬಾಂಬ್ ಬೆದರಿಕೆಯ ಈಮೇಲ್ ಬಂದಿತ್ತು. ಬಳಿಕ ಪೊಲೀಸರು ಪಶ್ಚಿಮ ಬಂಗಾಳದ  ಡಾರ್ಜಿಲಿಂಗ್ ಜಿಲ್ಲೆಯ ದೀಪಾಂಜನ್ ಮಿಶ್ರಾನನ್ನು ಬಂಧಿಸಿದರು. ನಿರುದ್ಯೋಗದ ಹತಾಶೆ ಇಂಥದ್ದನ್ನು ಯುವಸಮೂಹ ದಿಂದ ಮಾಡಿಸುತ್ತಿದೆಯೇ?

ದೇಶದ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಭಾವ ಹರಡತೊಡಗುವುದೆಂದರೆ, ಅಪರಾಧ ಪ್ರಕರಣಗಳಿಗೆ ವೇದಿಕೆ  ಸಿದ್ಧಗೊಳ್ಳುವುದು ಎಂದರ್ಥ. ಹೀಗಾದರೆ ಸಮಾಜಘಾತುಕರು ಮತ್ತೆ ತಲೆ ಎತ್ತುತ್ತಾರೆ. ಕಾನೂನು ಭಂಜಕ  ಕೃತ್ಯಗಳಿಗಿಳಿಯುತ್ತಾರೆ. ಇದರಿಂದ ಜನಸಾಮಾನ್ಯರು ಭಯದಲ್ಲೇ  ಬದುಕಬೇಕಾಗುತ್ತದೆ. ಬಿಷ್ಣೋಯ್ ಗ್ಯಾಂಗ್‌ನ ಸುತ್ತ  ಕೇಳಿಬರುತ್ತಿರುವ ಸುದ್ದಿಗಳನ್ನು ನೋಡುವಾಗ ವ್ಯವಸ್ಥೆಯೇ ಈ ಅರಾಜಕ ಸ್ಥಿತಿಗೆ ವೇದಿಕೆ ಸಜ್ಜು ಮಾಡುತ್ತಿರುವಂತೆ  ಕಾಣಿಸುತ್ತದೆ. ಸಿಕ್ಖ್ ಪ್ರತ್ಯೇಕತಾವಾದಿ ನಾಯಕನಾಗಿದ್ದ ಬಿಂದ್ರನ್ ವಾಲೆಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರೂ  ಹೀಗೆಯೇ ಬಳಸಿಕೊಂಡಿದ್ದರು ಎಂಬ ಅಭಿಪ್ರಾಯವಿದೆ. ಅಂತಿಮವಾಗಿ ಆತ ಸರಕಾರಕ್ಕೆ ತಲೆ ನೋವಾಗುವಂತೆ ಬೆಳೆದ.  ಕೊನೆಗೆ ಬ್ಲೂಸ್ಟಾರ್ ಕಾರ್ಯಾಚರಣೆಯ ಮೂಲಕ ಆತನ ಹತ್ಯೆಗೆ ಇಂದಿರಾ ಕಾರಣವಾದರು. ಆದರೆ ಅದೇ ಕಾರಣಕ್ಕಾಗಿ  ಆತನ ಬೆಂಬಲಿಗರು ಇಂದಿರಾ ಗಾಂಧಿಯನ್ನೂ ಹತ್ಯೆಗೈದರು. ಅಪರಾಧಿಗಳನ್ನು ವ್ಯವಸ್ಥೆ ಸ್ವಲಾಭಕ್ಕೆ ಬಳಸಿಕೊಳ್ಳತೊಡಗಿದರೆ  ಅಂತಿಮವಾಗಿ ಅವರು ವ್ಯವಸ್ಥೆಯ ಮೇಲೆಯೇ ಸವಾರಿ ನಡೆಸುತ್ತಾರೆ ಎಂಬುದಕ್ಕೆ ಇದನ್ನು ಉದಾಹರಣೆಯಾಗಿ ಎತ್ತಿಕೊಳ್ಳ  ಬಹುದು.

ಒಂದುಕಡೆ, ನಾಗರಿಕ ಸಂಘರ್ಷಕ್ಕೆ ಅಥವಾ ಕೋಮುಗಲಭೆಗೆ ಪ್ರಚೋದನೆ ನೀಡುವ ಬೆಳವಣಿಗೆಗಳು ನಡೆಯುತ್ತಿರುವುದು  ಮತ್ತು ಇನ್ನೊಂದು ಕಡೆ, ಕಾನೂನಿನ ಭಯವೇ ಇಲ್ಲದೇ ಬಾಂಬ್ ಬೆದರಿಕೆಯ ಕರೆಗಳು ಬರುತ್ತಿರುವುದು ಸಂಭಾವ್ಯ ಅಪಾಯದ ಸೂಚನೆಯನ್ನು ನೀಡುತ್ತಿದೆ. ಅತ್ಯಂತ ಸುರಕ್ಷಿತವೆನ್ನಲಾಗುತ್ತಿರುವ ರೈಲು ಹಳಿಗಳಿಗೂ ಈಗ ಭಯ ಆವರಿಸಿದೆ.  ಇವೆಲ್ಲ ಕ್ಷುಲ್ಲಕ ಘಟನೆ ಗಳಲ್ಲ. ಅರಾಜಕ ಸ್ಥಿತಿಯೊಂದರ ಮುನ್ಸೂಚನೆಯಂತೆ ಇವನ್ನೆಲ್ಲ ನೋಡಬೇಕಾಗಿದೆ. ತನ್ನ ಗುರಿ  ಸಾಧನೆಗಾಗಿ ಪ್ರಭುತ್ವವೇ ಘಾತಕ ಗ್ಯಾಂಗ್‌ಗಳನ್ನು ಸಾಕುವುದು ಹೇಗೆ ಅಪಾಯಕಾರಿಯೋ ದೇಶದೊಳಗೆ ಧರ್ಮದ್ವೇಷವನ್ನು  ಬಿತ್ತುತ್ತಾ ಮತ್ತು ಗಲಭೆಗೆ ಪ್ರಚೋದನೆ ಕೊಡುತ್ತಾ ಸಾಗುವ ಬೆಳವಣಿಗೆಗಳೂ ಅಪಾಯಕಾರಿಯೇ. ಇವೆರಡೂ  ಅಂತಿಮವಾಗಿ ನಾಗರಿಕ ಸಮಾಜದ ಮೇಲೆ ಪ್ರಭುತ್ವದ ಹಿಡಿತವನ್ನು ಸಡಿಲಗೊಳಿಸುತ್ತದೆ. ಹಾಗಾದಾಗ ಕಾನೂನು  ಸುವ್ಯವಸ್ಥೆಗಾಗಿ ಖಜಾನೆಯಲ್ಲಿರುವ ಹಣವನ್ನು ಖರ್ಚು ಮಾಡಬೇಕಾದ ಒತ್ತಡವನ್ನು ತಂದಿಡುತ್ತದೆ. ಇದರಿಂದ ಅಭಿವೃದ್ಧಿ  ಕುಂಠಿತಗೊಂಡು  ಉತ್ಪಾದನೆ ಸ್ಥಗಿತಗೊಳುತ್ತದೆ. ಸದಾ ಭೀತಿಯಲ್ಲಿರುವ ಸಮೂಹದಿಂದ ನಿರ್ಮಾಣಾತ್ಮಕ ಆಲೋಚನೆ  ಸಾಧ್ಯವೂ ಇಲ್ಲ.

ಆದ್ದರಿಂದ ಕಾನೂನು ಸುವ್ಯವಸ್ಥೆಗೆ ತೊಡಕಾಗುವವರನ್ನು ಸರಕಾರ ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು. ಸಮಾಜದಲ್ಲಿ  ಭಯಮುಕ್ತ ಮತ್ತು ದ್ವೇಷ ಮುಕ್ತ ವಾತಾವರಣವನ್ನು ಉಂಟು ಮಾಡಬೇಕು.