‘ಬಿಜೆಪಿ ಅಮಾಯಕರನ್ನು ಬಂಧಿಸಿ, ಅಪರಾಧಿಗಳನ್ನು ಸಚಿವರನ್ನಾಗಿ ಮಾಡುತ್ತಿದೆ’: ಅಮಿತ್ ಶಾ ಪ್ರಶ್ನೆಗೆ ಕೇಜ್ರಿವಾಲ್ ತಿರುಗೇಟು

0
418

ಸನ್ಮಾರ್ಗ ವಾರ್ತೆ

ನವದೆಹಲಿ: ಜೈಲಿನಲ್ಲಿದ್ದಾಗ ಸರ್ಕಾರಿ ಆದೇಶ ಹೊರಡಿಸಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಗ್ಗೆ ಪ್ರಶ್ನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ. ತಮ್ಮನ್ನು ರಾಜಕೀಯ ಪಿತೂರಿಯಿಂದಾಗಿ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲಾಗಿತ್ತು, ಹಾಗಾಗಿ 160 ದಿನಗಳ ಕಾಲ ಜೈಲಿನಿಂದಲೇ ಆಡಳಿತ ನಡೆಸಬೇಕಾಯಿತು ಎಂದು ಅವರು ಹೇಳಿದ್ದಾರೆ.

​ಐದು ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಬಹುದಾದ ಅಪರಾಧಗಳ ಆರೋಪಿಗಳು ಸಚಿವರಾಗಿ ಮುಂದುವರಿಯುವುದು ಹೇಗೆ ಎಂದು ಅಮಿತ್ ಶಾ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, “ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿ ಅವರನ್ನು ಒಂದೇ ಪಕ್ಷಕ್ಕೆ ಸೇರಿಸಿ ಸಚಿವರನ್ನಾಗಿ ಮಾಡಿದರೆ ತಪ್ಪೇನು? ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕೇ?” ಎಂದು ಪ್ರತಿಪ್ರಶ್ನೆ ಹಾಕಿದರು.

ಅಮಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗುತ್ತಿದ್ದರೆ, ಗಂಭೀರ ಅಪರಾಧ ಮಾಡಿದವರು ಕೇಸರಿ ಪಕ್ಷದಲ್ಲಿದ್ದರೆ ಸಚಿವರನ್ನಾಗಿ ಮಾಡಲಾಗುತ್ತದೆ ಎಂದು ಕೇಜ್ರಿವಾಲ್ ಆರೋಪಿಸಿದರು.

​ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಲಾಯಿತು.