ಉದಯಪುರ ಟೈಲರ್ ಹಂತಕರಿಗೂ ಬಿಜೆಪಿಗೂ ನಂಟು: ಅಶೋಕ್ ಗೆಹ್ಲೋಟ್ ಗಂಭೀರ ಆರೋಪ

0
510

ಸನ್ಮಾರ್ಗ ವಾರ್ತೆ

ಜೋದಪುರ: ರಾಜಸ್ಥಾನದ ಉದಯಪುರದಲ್ಲಿ ಹತ್ಯೆಗೀಡಾದ ದರ್ಜಿ ಕನ್ಹಯ್ಯ ಲಾಲ್ ತೆಲಿ ಹಂತಕರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗಂಭೀರ ಆರೋಪ ಮಾಡಿದ್ದಾರೆ.

ಆರೋಪಿಗಳನ್ನು ಈ ಘಟನೆಗೂ ಕೆಲವು ದಿವಸಗಳ ಮೊದಲು ನಡೆದ ಇನ್ನೊಂದು ಪ್ರಕರಣದಲ್ಲಿ ಬಂಧಿಸಿದಾಗ ಅವರ ಬಿಡುಗಡೆ ಮಾಡಿಸಲು ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಅಶೋಕ್ ಗೆಹ್ಲೋಟ್ ಬಹಿರಂಗ ಪಡಿಸಿದರು.

ಆದರೆ ಬಿಜೆಪಿ ಈಗ ಕನ್ಯಯ್ಯ ಲಾಲ್ ಹತ್ಯೆಯ ವಿಷಯವನ್ನು ಪ್ರಸ್ತಾಪಿಸಿ ರಾಜಸ್ಥಾನದಲ್ಲಿ  ನವೆಂಬರ್ 25ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯ ಮೊದಲು ಕೋಮು ಗಲಭೆಗೆ ಯತ್ನಿಸುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದರು.

ಮೋದಿ ಕಳೆದ ವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಕನ್ಯಯ್ಯ ಲಾಲ್ ಪ್ರಕರಣದಲ್ಲಿ ಗೆಹ್ಲೋಟ್ ಸರಕಾರ ವೋಟು ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದೇ, ಗೆಹ್ಲೋಟ್ ಪ್ರಕರಣದ ಒಳಮರ್ಮವನ್ನು ಹೊರಗೆಡಹಲು ಕಾರಣವಾಯಿತು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬದಲು ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್ಒಜಿ) ಈ ಪ್ರಕರಣವನ್ನು ನಿರ್ವಹಿಸಿದ್ದರೆ, ಇಷ್ಟರಲ್ಲಿ ಆರೋಪಗಳ ವಿರುದ್ಧ ಕಠಿಣ ಕ್ರಮ ಜರಗಿಸಿ ಆಗುತ್ತಿತ್ತು ಎಂದು ಭಾನುವಾರ ಜೋಧಪುರ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಸ್ಥಾನ ಮುಖ್ಯಮಂತ್ರಿ ಹೇಳಿದರು.

ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕಳೆದ ವರ್ಷ ಜೂನ್ 28 ರಂದು ಉದಯಪುರದ ಅವರ ಅಂಗಡಿಯೊಳಗೆ ಇಬ್ಬರು ದುಷ್ಕರ್ಮಿಗಳು ಕನ್ಹಯ್ಯ ಲಾಲ್ ಅವರ ಶಿರಚ್ಛೇದ ಮಾಡಿದ್ದರು. ಉದಯಪುರ ದರ್ಜಿಯ ಶಿರಚ್ಛೇದನ ಪ್ರಕರಣವು ದೇಶಾದ್ಯಂತ ಪ್ರತಿಭಟನೆ ಹುಟ್ಟುಹಾಕಿತು ಮತ್ತು ಸಾರ್ವಜನಿಕ ಆಕ್ರೋಶವನ್ನು ಕಾರಣವಾಗಿತ್ತು.