ಸನ್ಮಾರ್ಗ ವಾರ್ತೆ
ಅಹಮದಾಬಾದ್: ಭಾರತೀಯ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ತಮ್ಮ ರಾಜಕೀಯ ನಿಲುವನ್ನು ಬದಲಾಯಿಸಿದ ನಂತರ ಪ್ರಮುಖ ಬೆಳವಣಿಗೆಯಾಗಿದೆ. ವರದಿಗಳ ಪ್ರಕಾರ, ಗುಜರಾತ್ನ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ಗೆ ಸೇರಿದ 978 ಚದರ ಮೀಟರ್ ನಿವೇಶನವನ್ನು ಯೂಸುಫ್ ಪಠಾಣ್ ಅವರಿಗೆ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ದೀರ್ಘಕಾಲದ ಕಾನೂನು ಹೋರಾಟಕ್ಕೆ ಒಳಪಟ್ಟಿದ್ದ ಭೂಮಿಯ ಮೇಲೆ ಈಗ ಹೊಸ ಹೆಜ್ಜೆ ಇಡಲಾಗಿದೆ.
ವಿವಾದಿತ ಭೂಮಿಯು ವಡೋದರಾದ ಥಾಂಡಲ್ಜಾ ಪ್ರದೇಶದಲ್ಲಿದ್ದು, ಯೂಸುಫ್ ಪಠಾಣ್ ಅವರ ಕುಟುಂಬದ ಮನೆಯ ಪಕ್ಕದಲ್ಲಿದೆ. ಸರ್ಕಾರದ ನಿರ್ಧಾರದಂತೆ, 978 ಚದರ ಮೀಟರ್ಗಳಲ್ಲಿ 500 ಚದರ ಮೀಟರ್ ಅನ್ನು ವಸತಿ ಉದ್ದೇಶಗಳಿಗಾಗಿ ಉಚಿತವಾಗಿ ಹಂಚಿಕೆ ಮಾಡಲಾಗುತ್ತದೆ. ಉಳಿದ 478 ಚದರ ಮೀಟರ್ ಭೂಮಿಯನ್ನು ನಿಗದಿತ ಮೌಲ್ಯಮಾಪನದ ಶೇಕಡಾ 55 ರಷ್ಟು ದರದಲ್ಲಿ ವರ್ಗಾಯಿಸಲಾಗುತ್ತದೆ.
ಭೂಮಿಯ ಒಟ್ಟು ಮೌಲ್ಯವು ಸುಮಾರು 20.5 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ವರದಿಗಳು ಹೇಳಿವೆ. ಅಂತರರಾಷ್ಟ್ರೀಯ ಕ್ರಿಕೆಟಿಗರಿಗಾಗಿರುವ ಸರ್ಕಾರದ ನೀತಿಯ ಆಧಾರದ ಮೇಲೆ ಭೂಮಿಯನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ವಿವರಣೆ ನೀಡಲಾಗಿದೆ.
2012 ರಲ್ಲಿ, ಯೂಸುಫ್ ಪಠಾಣ್ ಅವರು 99 ವರ್ಷಗಳ ಕಾಲ ಭೂಮಿಯನ್ನು ಗುತ್ತಿಗೆಗೆ ನೀಡುವಂತೆ ಕೋರಿ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ಸಂಪರ್ಸಿಕಿಸಿದ್ದರು. ಆದಾಗ್ಯೂ, ಸಾರ್ವಜನಿಕ ಹರಾಜು ನಡೆಸದೆ ಭೂಮಿಯನ್ನು ವರ್ಗಾಯಿಸುವ ಪ್ರಸ್ತಾಪವನ್ನು ಸರ್ಕಾರ ಒಪ್ಪಿಕೊಂಡಿರಲಿಲ್ಲ.
ಬಹರಂಪುರ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ 2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ, ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಪಠಾಣ್ಗೆ ನೋಟಿಸ್ ಜಾರಿ ಮಾಡಿ, ತಮ್ಮ ಭೂಮಿಯಲ್ಲಿನ ಒತ್ತುವರಿಯನ್ನು ತೆರವುಗೊಳಿಸುವಂತೆ ಕೇಳಿಕೊಂಡಿತ್ತು. ಇದರ ವಿರುದ್ಧ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
2025 ರಲ್ಲಿ, ಗುಜರಾತ್ ಹೈಕೋರ್ಟ್ನ ಏಕಸದಸ್ಯ ಪೀಠವು ಭೂಮಿಯನ್ನು ಹಂಚಿಕೆ ಮಾಡುವ ಯೂಸುಫ್ ಪಠಾಣ್ ಅವರ ವಿನಂತಿಯನ್ನು ತಿರಸ್ಕರಿಸಿತು ಮತ್ತು ಅಧಿಕೃತ ಅನುಮತಿಯಿಲ್ಲದೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಒತ್ತುವರಿ ಎಂಬ ನಿಲುವನ್ನು ತೆಗೆದುಕೊಂಡಿತು.
ಯೂಸುಫ್ ಪಠಾಣ್ ಅವರು ಆಗಸ್ಟ್ 31, 2026 ರಂದು ಗುಜರಾತ್ ಹೈಕೋರ್ಟ್ನಿಂದ ಭೂಮಿಗೆ ಸಂಬಂಧಿಸಿದ ತಮ್ಮ ಮೇಲ್ಮನವಿಯನ್ನು ಹಿಂಪಡೆದರು. ಅಂತರರಾಷ್ಟ್ರೀಯ ಕ್ರಿಕೆಟಿಗರಿಗಾಗಿರುವ ಸರ್ಕಾರದ ನೀತಿಯ ಪ್ರಕಾರ ಭೂಮಿ ಹಂಚಿಕೆ ಮಾಡುವ ವಿಷಯವನ್ನು ಆಡಳಿತ ಮಟ್ಟದಲ್ಲಿ ಪರಿಗಣಿಸಲಾಗುತ್ತಿದೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ನಂತರ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ನ್ಯಾಯಾಲಯ ದಾಖಲಿಸಿತು.
2024 ರಲ್ಲಿ ತೃಣಮೂಲ ಕಾಂಗ್ರೆಸ್ ಟಿಕೆಟ್ನಲ್ಲಿ ಲೋಕಸಭೆ ಪ್ರವೇಶಿಸಿದ್ದ ಯೂಸುಫ್ ಪಠಾಣ್, ಜೂನ್ 2026 ರಲ್ಲಿ ಪಕ್ಷವನ್ನು ತೊರೆದು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್ಸಿಪಿಐ) ಸೇರಿದರು. ಭೂಮಿ ಹಂಚಿಕೆಗೆ ಸಂಬಂಧಿಸಿದ ಹೊಸ ಸರ್ಕಾರದ ನಿರ್ಧಾರವು ನಂತರ ಬಿಡುಗಡೆಯಾಯಿತು.
ರಾಜಕೀಯ ಬದಲಾವಣೆ ಮತ್ತು ಭೂಮಿ ಹಂಚಿಕೆ ನಿರ್ಧಾರದ ಸಮಯದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಯೂಸುಫ್ ಪಠಾಣ್ ಅವರ ರಾಜಕೀಯ ಬದಲಾವಣೆಯೇ ಸರ್ಕಾರದ ನಿರ್ಧಾರಕ್ಕೆ ಕಾರಣ ಎಂಬುದನ್ನು ಸಾಬೀತುಪಡಿಸುವ ಯಾವುದೇ ಮಾಹಿತಿ ಹೊರಬಂದಿಲ್ಲ. ಭೂಮಿ ವರ್ಗಾವಣೆಗಾಗಿ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಮುಂದಿನ ಹಂತಗಳನ್ನು ಪೂರ್ಣಗೊಳಿಸಬೇಕಾಗಿದೆ.












