ಬೊಲೆಬಾಬಾ ಸತ್ಸಂಗ ದುರಂತ: ಸಂತ್ರಸ್ತರನ್ನು ಸಂತೈಸಿದ ರಾಹುಲ್ ಗಾಂಧಿ

0
134

ಸನ್ಮಾರ್ಗ ವಾರ್ತೆ

ನವದೆಹಲಿ, ಜು. 5 : ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಲ್ತುಳಿತ ಪೀಡಿತ ಹತ್ರಾಸಿಗೆ ತೆರಳಿದ್ದು ಸಂತ್ರಸ್ತರನ್ನು ಸಂತೈಸಿದ್ದಾರೆ.

ಕಾಲ್ತುಳಿತದಿಂದ 121 ಮಂದಿ ಕೊಲ್ಲಲ್ಪಟ್ಟಿದ್ದು ಅವರ ಕುಟುಂಬದವರನ್ನು ರಾಹುಲ್ ಗಾಂಧಿ ಭೇಟಿಯಾಗಿ ತನಗೆ ಸಾಧ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಭರವಸೆ ನೀಡಿರುವುದಾಗಿ ಸಂತ್ರಸ್ತರ ಕುಟುಂಬದಲ್ಲಿ ಒಬ್ಬರು ತಿಳಿಸಿದ್ದಾರೆ.

‘ಭೋಲೆ ಬಾಬಾ’ ಎಂದು ಕರೆಯಲ್ಪಡುವ ಧಾರ್ಮಿಕ ಬೋಧಕ ನಾರಾಯಣ ಸಕರ್ ಹರಿ ಅವರ ಸತ್ಸಂಗದಲ್ಲಿ ಮಂಗಳವಾರ ಸಂಜೆ ಕಾಲ್ತುಳಿತ ಸಂಭವಿಸಿತ್ತು. ಇದೇ ವೇಳೆ, ಹತ್ರಾಸ್‍ನಲ್ಲಿ ಸತ್ಸಂಗ ನಡೆಸಿದ ಸ್ವಯಂ ಘೋಷಿತ ದೇವಮಾನವ ‘ಭೋಲೆ ಬಾಬಾ’ ಗಾಗಿ ಉತ್ತರ ಪ್ರದೇಶ ಪೊಲೀಸರು ಗುರುವಾರ ಮೈನ್‍ಪುರಿಯಲ್ಲಿರುವ ರಾಮ್ ಕುಟಿರ್ ಚಾರಿಟೇಬಲ್ ಟ್ರಸ್ಟ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಕ್ರಮದ ಆಯೋಜಕರ ವಿರುದ್ಧ ಈಗಾಗಲೇ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಆದರೆ ಎಫ್‍ಐಆರ್ ನಲ್ಲಿ ಬೋಲೆ ಬಾಬ ಅವರ ಹೆಸರೇ ಇಲ್ಲದಿರುವುದು ವಿರೋಧಕ್ಕೆ ಕಾರಣವಾಗಿದೆ.

ಜುಲೈ 4 ರಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ), ಮೈನ್‍ಪುರಿ ಸುನೀಲ್ ಕುಮಾರ್, “ಆಶ್ರಮದೊಳಗೆ ಬಾಬಾ ಪತ್ತೆಯಾಗಿಲ್ಲ” ಎಂದು ಹೇಳಿದ್ದು ಅವರ ಪ್ರಕಾರ ಆಶ್ರಮದೊಳಗೆ 40-50 ಸೇವಾದಾರರಿದ್ದಾರೆ. ಅವರು (‘ಭೋಲೆ ಬಾಬಾ’) ಒಳಗೆ ಇಲ್ಲ, ಅವರು ನಿನ್ನೆಯೂ ಇರಲಿಲ್ಲ, ಇಂದು ಇಲ್ಲ ಎಂದು ಹೇಳಿದ್ದರು.

ಆಶ್ರಮದಲ್ಲಿ ಶೋಧ ಕಾರ್ಯಕ್ಕೆ ಬಂದಿದ್ದ ಮೈನ್‍ಪುರಿ ನಗರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಮಿಥಾಸ್, “ನಾನು ಆಶ್ರಮದ ಭದ್ರತೆಯನ್ನು ಪರಿಶೀಲಿಸಲು ಬಂದಿದ್ದೇನೆ. ಇಲ್ಲಿ ಯಾರೂ ಕಂಡುಬಂದಿಲ್ಲ. ” ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ಪ್ರಾಥಮಿಕ ವರದಿಯ ಪ್ರಕಾರ, ಭಕ್ತರು ಆಶೀರ್ವಾದ ಪಡೆಯಲು ಮತ್ತು ಬೋಧಕನ ಪಾದದ ಸುತ್ತಲೂ ಇರುವ ಮಣ್ಣು ಸಂಗ್ರಹಿಸಲು ಧಾವಿಸಿದರು, ಆದರೆ ‘ಭೋಲೆ ಬಾಬಾ’ ಅವರ ಭದ್ರತಾ ಸಿಬ್ಬಂದಿ ತಡೆದದ್ದರಿಂದ ಜನರು ಒಬ್ಬರನ್ನೊಬ್ಬರು ತಳ್ಳಲು ಪ್ರಾರಂಭಿಸಿದರು, ಇದರಿಂದಾಗಿ ಹಲವಾರು ಜನರು ನೆಲಕ್ಕೆ ಬಿದ್ದು ಕಾಲ್ತುಳಿತ ಸಂಭವಿಸಿ 121 ಮಂದಿ ಅಸುನೀಗಲು ಕಾರಣವಾಗಿದೆ.

ಇದೇ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ಗಂಡಸರು ಮತ್ತು ಇಬ್ಬರು ಹೆಂಗಸರು ಸೇರಿದ್ದಾರೆ. ಮುಖ್ಯ ಸೇವಾದಾರ್ ದೇವಪ್ರಕಾ ಮಧುಕರ್ ತಲೆ ತಪ್ಪಿಸಿಕೊಂಡಿದ್ದಾನೆ. ಇವನನ್ನು ಹುಡುಕಿ ಕೊಟ್ಟವರಿಗೆ ಯೋಗಿ ಆದಿತ್ಯನಾಥ ಸರಕಾರ ಒಂದು ಲಕ್ಷರೂಪಾಯಿ ಬಹುಮಾನವನ್ನು ಘೋಷಿಸಿದೆ.