ಸನ್ಮಾರ್ಗ ವಾರ್ತೆ
ನವದೆಹಲಿ: ಜಗತ್ತು ಹವಾಮಾನ ಬದಲಾವಣೆ ಮತ್ತು ಬಿಕ್ಕಟ್ಟಿನ ಸಂದರ್ಭವನ್ನು ಎದುರಿಸುತ್ತಿರುವ ಈ ದಿನಗಳಲ್ಲಿ, ಬೌದ್ಧ ಧರ್ಮದ ವಿವಿಧ ಶಾಖೆಗಳು ಬಿಕ್ಕಟ್ಟುಗಳನ್ನು ಎದುರಿಸಲು ಸಮರ್ಥ ತತ್ವಗಳನ್ನು ನೀಡುತ್ತದೆ, “ಸಂಕುಚಿತ ಪಂಥೀಯವಾದವನ್ನು” ಹೇಗೆ ನಿರ್ವಹಿಸಬೇಕೆಂದು ಪಾಠ ನೀಡುತ್ತದೆ ಎಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಅಭಿಪ್ರಾಯಪಟ್ಟರು.
ಅವರು ಬೌದ್ಧ ಧರ್ಮದ ಪ್ರಮುಖ ಸಂದೇಶವು ಶಾಂತಿ ಮತ್ತು ಅಹಿಂಸೆಯ ಮೇಲೆ ಕೇಂದ್ರೀಕೃತವಾಗಿದೆ ಎಂಬುದನ್ನು ವಿಶ್ಲೇಷಿಸಿದ್ದು, ಈ ತತ್ವಗಳು ಇಂದಿನ ವಿಶ್ವದ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತವೆ ಎಂದು ಹೇಳಿದರು.
ನವದೆಹಲಿಯಲ್ಲಿ ನಡೆದ ಮೊದಲ ಏಷ್ಯನ್ ಬೌದ್ಧ ಶೃಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮುರ್ಮು, ಏಷ್ಯಾವನ್ನು ಬಲಪಡಿಸುವಲ್ಲಿ ಬೌದ್ಧ ಧರ್ಮದ ಪಾತ್ರದ ಬಗ್ಗೆ ಚರ್ಚಿಸುವ ಅಗತ್ಯವಿದೆ ಎಂದು ಹೇಳಿದರು.
ಬುದ್ಧನ ಸಂದೇಶವು ಹಿಂಸೆಯನ್ನು ತಡೆಯುವುದು ಮಾತ್ರವಲ್ಲದೆ ಎಲ್ಲಾ ರೀತಿಯ ದುರಾಸೆ ಮತ್ತು ದ್ವೇಷದಿಂದ ಮುಕ್ತವಾದ ನಿಜವಾದ ಶಾಂತಿಯನ್ನು ತರುತ್ತದೆ ಎಂಬುದನ್ನು ಮುರ್ಮು ಒತ್ತಿ ಹೇಳಿದ್ದು, “ನಾವು ಬುದ್ಧ ಧರ್ಮದ ಚರ್ಚೆಯನ್ನು ವಿಸ್ತರಿಸಬೇಕು. ಏಷ್ಯಾ ಮತ್ತು ಜಗತ್ತಿಗೆ ಬುದ್ಧನ ಬೋಧನೆಗಳು ಶಾಂತಿಯ ಮತ್ತು ಸತ್ಯದ ತತ್ವವನ್ನು ಹೇಗೆ ನೀಡಬಲ್ಲವು ಎಂಬುದನ್ನು ಅರಿಯಬೇಕು. ಬುದ್ಧನ ಪ್ರಕಾರ, ದುರಾಸೆ ಮತ್ತು ದ್ವೇಷವು ಎಲ್ಲಾ ದುಃಖದ ಮೂಲಗಳಾಗಿವೆ ಮತ್ತು ಈ ಮಾನಸಿಕ ಶಕ್ತಿಗಳನ್ನು ಹತೋಟಿಗೆ ತರುವ ಮೂಲಕ ನಿಜವಾದ ಶಾಂತಿಯನ್ನು ಸಾಧಿಸಬಹುದು ಎಂಬ ಸಂದೇಶವನ್ನು ಅವರು ಪುನರುಚ್ಚರಿಸಿದರು.
ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ ಸಹಯೋಗದಲ್ಲಿ ಎರಡು ದಿನಗಳ ಶೃಂಗ ಸಭೆಯನ್ನು ಆಯೋಜಿಸಲಾಗಿತ್ತು.












