ಸಿದ್ಧಾರ್ಥ್ ಮೃತದೇಹವನ್ನು ದಡಕ್ಕೆ ತಂದ ಮೀನುಗಾರ ರಿತೇಶ್: ರಾಜ್ ಬಿಡುಗಡೆಯಲ್ಲಿ ಭಾಗಿಯಾಗಿದ್ದ ಸಿದ್ಧಾರ್ಥ್

0
1611

ಮಂಗಳೂರು: ಕೆಫೆ ಕಾಫಿ ಡೇ ಮಾಲಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರ ಮೃತದೇಹ ಇಂದು ಬೆಳಗ್ಗೆ ಸುಮಾರು ೭:೩೦ರ ಸಮಯಕ್ಕೆ ಇಲ್ಲಿನ ಹೊಯಿಗೆ ಬಜಾರ್ ನ ನದೀ ತಟದಲ್ಲಿ ಸ್ಥಳೀಯ ಮೀನುಗಾರ ರಿತೇಶ್ ಎಂಬವರಿಗೆ ಸಿಕ್ಕ ಬಳಿಕ ಕಳೆದ ೩೬ ಗಂಟೆಗಳಿಂದ ಸಿದ್ಧಾರ್ಥ್ ಗಾಗಿ ಕಾರ್ಯಾಚರಣೆ ಸ್ಥಗಿತಗೊಂಡಿದೆ.

ರಿತೇಶ್ ಸೇರಿ ಮೀನು ಹಿಡಿಯಲು ಮೂವರು ದೋಣಿಯಲ್ಲಿ ಹೋಗುತ್ತಿದ್ದ ವೇಳೆ ಮೃತದೇಹ ತೇಲುತ್ತಿರುವುದನ್ನು ಕಂಡು ಇದು ಸಿದ್ಧಾರ್ಥ್ ಅವರದ್ದೇ ಆಗಿರಬಹುದೆಂದು ಅವರು ಅನುಮಾನಿಸಿದರು. ನೇತ್ರಾವತಿ ನದಿಯಲ್ಲಿ ಸಿದ್ಧಾರ್ಥ್ ಗಾಗಿ ಹುಡುಕಾಟ ನಡೆಯುತ್ತಿರುವುದು ಇಡೀ ರಾಜ್ಯಕ್ಕೇ ಗೊತ್ತಿರುವುದರಿಂದ ರಿತೇಶ್ ಮತ್ತು ಬಳಗ ಶವದ ಬಗ್ಗೆ ಕುತೂಹಲ ತಾಳಿದ್ದು ಸಹಜವಾಗಿತ್ತು. ಹಾಗೆ ಶವವನ್ನು ದಡಕ್ಕೆ ತಂದು ಪೊಲೀಸರಿಗೆ ತಿಳಿಸಿದ್ದಾರೆ.

ಸಿದ್ಧಾರ್ಥ್ ನದಿಗೆ ಹಾರಿದ ನೇತ್ರಾವತಿ ಸೇತುವೆಗಿಂತ ಶವ ಸಿಕ್ಕಿದ ಹೊಯಿಗೆ ಬಜಾರ್ ನದಿ ತಟಕ್ಕೆ ಸುಮಾರು ಸುಮಾರು 4-5 ಕಿ.ಮೀ ದೂರವಿದೆ. ಅಲ್ಲದೆ, ಮೀನುಗಾರಿಕಾ ಸಂಸ್ಥೆಯಿಂದಲೂ ನಿನ್ನೆ ಕರೆ ಬಂದಿದ್ದು, ಮೀನುಗಾರರು ಶವ ಹುಡುಕಾಟದಲ್ಲಿ ನೆರವಾಗಬೇಕೆಂದು ಸೂಚಿಸಲಾಗಿತ್ತು ಎಂದು ರಿತೇಶ್ ಹೇಳಿರುವರಲ್ಲದೆ, ಹೀಗಾಗಿ 4 ದೋಣಿಗಳ ಮೂಲಕ ತೆರಳಿ ನಿನ್ನೆಯೂ ಹುಡುಕಾಡಿದ್ದೆವು ಅಂದಿದ್ದಾರೆ.

ಸಿದ್ಧಾರ್ಥ್ ನದಿಗೆ ಹಾರಿರುವರೆಂದು ಭಾವಿಸಲಾದ ಜಾಗಕ್ಕೂ ಮೃತದೇಹ ಸಿಕ್ಕ ಜಾಗಕ್ಕೂ ನಡುವೆ ಆಳದಲ್ಲಿ ತುಂಬಾ ವ್ಯತ್ಯಾಸ ಇದೆ. ಅವರು ಹಾರಿದ ಭಾಗದಲ್ಲಿ 20-25 ಅಡಿ ಆಳ ಇರಬಹುದಾದರೆ ಮೃತದೇಹ ಸಿಕ್ಕ ಭಾಗದಲ್ಲಿ 5-6 ಅಡಿ ಆಳವಿರಬಹುದು. ನೀರಿನೊಳಗೆ ಬಿದ್ದ ದೇಹ ಮೇಲೆ ಬರಲು 18-24 ಗಂಟೆ ತೆಗೆದುಕೊಳ್ಳುತ್ತದೆ. ಯಾಕೆಂದರೆ, ಮೃತದೇಹ ಊದಿಕೊಳ್ಳಲು ಇಷ್ಟು ಸಮಯ ಬೇಕು. ಹೀಗೆ ಊದಿಕೊಂಡ ಬಳಿಕ ದೇಹ ನೀರಿನಾಳದಿಂದ ಮೇಲೆ ಬರುತ್ತದೆ.

ಸಿದ್ಧಾರ್ಥರಿಗಾಗಿ ಸೋಮವಾರ ರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿತ್ತು. ಆ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿ ಇಂದು ಮುಂಜಾನೆ 4 ಗಂಟೆ ಸುಮಾರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಇದೀಗ ಮೃತದೇಹದ ಮರಣೋತ್ತರ ಪರೀಕ್ಷೆಯೂ ನಗರದ ವೆನ್ ಲಾಕ್ ಆಸ್ಪತ್ರೆಗೆ ಮುಗಿದಿದ್ದು, ಶವವನ್ನು ಚಿಕ್ಕಮಗಳೂರಿನ ಅವರ ನಿವಾಸಕ್ಕೆ ರವಾನಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಇದೇವೇಳೆ, ಅವರು ಜೀವಂತ ಇರುವಾಗ ಸುದ್ದಿಯಾಗದೆ ಹೋದ ವಿಷಯಗಳು ಒಂದೊಂದಾಗಿ ಬಹಿರಂಗಕ್ಕೆ ಬರುತ್ತಿದ್ದು, ವರ ನಟ ಡಾ. ರಾಜ್‍ಕುಮಾರ್ ಅವರು 19 ವರ್ಷಗಳ ಹಿಂದೆ ಅಪಹರಣಕ್ಕೀಡಾಗಿದ್ದ ಸಂದರ್ಭದಲ್ಲಿ ಅವರ ಬಿಡುಗಡೆಗಾಗಿ ಸಿದ್ಧಾರ್ಥ್ ನೆರವಾಗಿದ್ದರು ಎಂಬ ಮಾಹಿತಿ ಲಭ್ಯವಾಗುತ್ತಿದೆ. ಕುಖ್ಯಾತ ಕಾಡುಗಳ್ಳ ವೀರಪ್ಪನ್‍ ರಾಜ್ ಕುಮಾರ್ ರನ್ನು ಬಿಡುಗಡೆ ಮಾಡಿರುವುದರ ಹಿಂದೆ ಸಿದ್ಧಾರ್ಥ್ ರ ಪ್ರಯತ್ನವಿತ್ತು ಎನ್ನಲಾಗಿದೆ.

ರಾಜ್ ಅಪಹರಣದ ಸಮಯದಲ್ಲಿ ಎಸ್‍ಎಂ ಕೃಷ್ಣ ಸಿಎಂ ಆಗಿದ್ದರಿಂದ ಆ ಇಡೀ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಸಿದ್ಧಾರ್ಥ್ ಗೆ ಸಾಧ್ಯವಾಯಿತು. ರಾಜ್ ಕುಟುಂಬವನ್ನು ಭೇಟಿಯಾಗಿ, ನಟ ರಜನಿಕಾಂತ್ ರನ್ನು ಬಳಸಿಕೊಂಡು ರಾಜ್ ಬಿಡುಗಡೆಗೆ ಸಿದ್ದಾರ್ಥ್ .ಪ್ರಯತ್ನಗಳನ್ನು ನಡೆಸಿದ್ದರು ಮತ್ತು ಇದಕ್ಕಾಗಿ ವೀರಪ್ಪನ್ ಸಂಪರ್ಕದಲ್ಲಿದ್ದ ಹಲವರನ್ನು ಸಂಪರ್ಕಿಸಿದ್ದರು ಎನ್ನಲಾಗುತ್ತಿದೆ.