ಸನ್ಮಾರ್ಗ ವಾರ್ತೆ
ಸೇತುವೆಯಿಂದ ಕಾರು ನದಿಗೆ ಬಿದ್ದು ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ತಮಿಳುನಾಡಿನ ಹೊಸೂರು ಮೂಲದ ಹರಿಪ್ರಸಾದ್ (50), ಗಾಯಗೊಂಡವನನ್ನು ಗೋಪಿ (48) ಎಂದು ಗುರುತಿಸಲಾಗಿದೆ.
ಕಾರು ಹೊಸೂರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು.
ಗಾಯಾಳುವಿಗೆ ನೆಲ್ಯಾಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಳಗೆ ಬಿದ್ದಿರಬಹುದೆಂದು ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ.
ಸ್ಥಳೀಯ ಪರಶುರಾಮ ಕ್ರೇನ್ ತಂಡ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರು ಮೇಲೆತ್ತುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ನೆಲ್ಯಾಡಿ ಹೊರ ಠಾಣಾ ಸಿಬ್ಬಂದಿ, ಉಪ್ಪಿನಂಗಡಿ ಠಾಣಾಧಿಕಾರಿ ಪರಿಶೀಲನೆ ನಡೆಸಿದರು.












