ಸನ್ಮಾರ್ಗ ವಾರ್ತೆ
ದೆಹಲಿ: ಆರು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣ ಮಾಡಿ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲಾಗಿದೆ. ಅನಂತರವೂ ನಗದು ವಹಿವಾಟೇ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದ್ದರೂ ಕಳೆದ ಆರು ವರ್ಷಗಳಲ್ಲಿ ನಗದು ಚಲಾವಣೆ ದುಪ್ಪಟ್ಟುಗೊಂಡಿದೆ ಎಂದು ಅಧಿಕೃತ ದತ್ತಾಂಶಗಳು ಹೇಳುತ್ತಿವೆ. ಡಿಸೆಂಬರ್ 23, 2022ಕ್ಕೆ ಅಂತ್ಯಗೊಂಡಂತೆ ಸಾರ್ವಜನಿಕ ನಗದು ಚಲಾವಣೆ ಮೌಲ್ಯವು 34.42 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ ಎಂದು ರಿಸರ್ವ್ ಬ್ಯಾಂಕ್ ಇಂಡಿಯಾ ದತ್ತಾಂಶಗಳಿಂದ ತಿಳಿದು ಬಂದಿದೆ. ಕಪ್ಪು ಹಣ ನಿಯಂತ್ರಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ, ನೋಟು ಅಮಾನ್ಯೀಕರಣ ನಿರ್ಧಾರ ಪ್ರಕಟಿಸಿದ ಕೆಲವೇ ದಿನಗಳ ಹಿಂದೆ, ನವೆಂಬರ್ 4ರಂದು ಸಾರ್ವಜನಿಕ ಚಲಾವಣೆಯಲ್ಲಿದ್ದ ನಗದು ಮೌಲ್ಯವು 17.74 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ನೋಟು ಅಮಾನ್ಯೀಕರಣದ ನಂತರ ನಗದು ಚಲಾವಣೆಯು ರೂ. 9 ಲಕ್ಷ ಕೋಟಿಗೆ ಕುಸಿದಿತ್ತು.
ಜನವರಿ 6, 2017ಕ್ಕೆ ಹೋಲಿಸಿದರೆ ನಗದು ಚಲಾವಣೆಯು ಮೂರು ಪಟ್ಟು ಅಥವಾ ಶೇ.260ರಷ್ಟು ಏರಿಕೆಯಾಗಿದ್ದು, ನವೆಂಬರ್ 4, 2016ಕ್ಕೆ ಹೋಲಿಸಿದರೆ ಶೇ. 83ರಷ್ಟು ಏರಿಕೆಯಾಗಿದೆ. ನೋಟು ಅಮಾನ್ಯೀಕರಣದ ನಿರ್ಧಾರ ಪ್ರಕಟಿಸಿದ ಅನಂತರ ಸರ್ಕಾರವು ಸಾರ್ವಜನಿಕರಿಗೆ ತಮ್ಮ ಬಳಿಯಿರುವ ನಿಷೇಧಿತ ನೋಟುಗಳನ್ನು ಬದಲಿಸಿಕೊಳ್ಳಲು ಅಲ್ಪ ಕಾಲಾವಕಾಶ ಮಾತ್ರ ನೀಡಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಾರ, ಬಹುತೇಕ ಒಟ್ಟಾರೆ ಮೌಲ್ಯದ ನಿಷೇಧಿತ ನೋಟುಗಳು ಬ್ಯಾಂಕ್ಗಳಿಗೆ ಮರಳಿವೆ.












