ಎನ್‌ಜಿಒಗಳ ವಿದೇಶಿ ಧನ ಸಹಾಯದ ಉದ್ದೇಶ, ಕಾರ್ಯನಿರ್ವಹಣಾ ಪ್ರದೇಶ ಘೋಷಣೆ ನಿಯಮಗಳನ್ನು ಬಿಗಿಗೊಳಿಸಿದ ಕೇಂದ್ರ

0
141

ಸನ್ಮಾರ್ಗ ವಾರ್ತೆ

ನವದೆಹಲಿ: ವಿದೇಶಿ ದೇಣಿಗೆಯನ್ನು ಅಪೇಕ್ಷಿಸುವ ಸರಕಾರೇತರ ಸಂಸ್ಥೆಗಳ (ಎನ್‌ಜಿಒ) ನಿಯಮಗಳನ್ನು ಕೇಂದ್ರ ಸರ್ಕಾರವು ಸೋಮವಾರ ತಿದ್ದುಪಡಿ ಮಾಡಿದ್ದು, ಇನ್ಮುಂದೆ ಅವುಗಳು ಮೊದಲೇ ನಿಗದಿಪಡಿಸಲಾದ ಉದ್ದೇಶಗಳ ಪಟ್ಟಿಯಿಂದಲೇ ತಮ್ಮ ಉದ್ದೇಶವನ್ನು ಆರಿಸಿಕೊಳ್ಳಬೇಕು ಮತ್ತು ತಾವು ಕಾರ್ಯನಿರ್ವಹಿಸಲಿರುವ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳನ್ನು ನಿರ್ದಿಷ್ಟಪಡಿಸಬೇಕು ಎಂದು ಕಡ್ಡಾಯಗೊಳಿಸಿದೆ.

ವಿದೇಶಿ ವಂತಿಗೆ ನಿಯಂತ್ರಣ ನಿಯಮಗಳಿಗೆ (ಎಫ್‌ಸಿಆರ್‌ಆರ್) ಈ ಪರಿಣಾಮದ ತಿದ್ದುಪಡಿಯನ್ನು ತಂದು ಗೃಹ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಸರಕಾರೇತರ ಸಂಸ್ಥೆಯೊಂದು ವಿದೇಶದಿಂದ ಧನಸಹಾಯವನ್ನು ಪಡೆಯಲು ವಿದೇಶಿ ವಂತಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಸ್ವಯಂಸೇವಾ ಸಂಸ್ಥೆಗಳಿಗಾಗಿ ಮೊದಲೇ ನಿಗದಿಪಡಿಸಲಾದ ಉದ್ದೇಶಗಳ ಪಟ್ಟಿಯು ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಒಳಗೊಂಡಿದೆ, ಆದರೆ ಧಾರ್ಮಿಕ ಮತಾಂತರಗಳನ್ನು ಸ್ಪಷ್ಟವಾಗಿ ಹೊರಗಿಟ್ಟಿದೆ. ವಿದೇಶಿ ಧನಸಹಾಯವನ್ನು ಕೋರಬಹುದಾದ ಧಾರ್ಮಿಕ ಚಟುವಟಿಕೆಗಳಲ್ಲಿ ಆರಾಧನಾ ಸ್ಥಳಗಳ ನಿರ್ಮಾಣ, ಧಾರ್ಮಿಕ ತತ್ವಶಾಸ್ತ್ರದ ದಾಖಲೀಕರಣ ಮತ್ತು ಸಂರಕ್ಷಣೆ, ಧಾರ್ಮಿಕ ಶಿಕ್ಷಣವನ್ನು ನೀಡುವುದು ಮತ್ತು ಸರ್ವಧರ್ಮ ಸಂವಾದ ಹಾಗೂ ಶಾಂತಿ ಮುಂತಾದ ಕ್ರಮಗಳನ್ನು ಸುಗಮಗೊಳಿಸುವುದು ಸೇರಿವೆ.

“ನೋಂದಣಿಗಾಗಿ ಸಲ್ಲಿಸುವ ಪ್ರತಿಯೊಂದು ಅರ್ಜಿಯೂ… ಈ ನಿಯಮಗಳಿಗೆ ಲಗತ್ತಿಸಲಾದ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಗಳ ಪಟ್ಟಿಯಿಂದ ಮಾತ್ರ ಆಯ್ದುಕೊಂಡ, ನೋಂದಣಿಯನ್ನು ಕೋರಲಾಗಿರುವ ಉದ್ದೇಶ ಅಥವಾ ಉದ್ದೇಶಗಳನ್ನು ಉಲ್ಲೇಖಿಸಬೇಕು; ಮತ್ತು… ಸಂಸ್ಥೆಯು ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಿರುವ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳನ್ನು ಉಲ್ಲೇಖಿಸಬೇಕು,” ಎಂದು ತಿದ್ದುಪಡಿಯಲ್ಲಿ ತಿಳಿಸಲಾಗಿದೆ.

ಕಾಯ್ದೆಯಡಿ ಈಗಾಗಲೇ ನೋಂದಾಯಿಸಲ್ಪಟ್ಟಿರುವ ಎಲ್ಲಾ ಸಂಸ್ಥೆಗಳಿಗೆ ತಮ್ಮ ನಿರ್ದಿಷ್ಟ ಉದ್ದೇಶ ಮತ್ತು ತಾವು ಕಾರ್ಯನಿರ್ವಹಿಸುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲು ಒಂದು ವರ್ಷದ ಸಮಯಾವಕಾಶ ನೀಡಲಾಗಿದೆ. ತಿದ್ದುಪಡಿ ಮಾಡಲಾದ ನಿಯಮಗಳ ಪ್ರಕಾರ, ಕಾರ್ಯನಿರ್ವಹಣೆಯ ಪ್ರತಿ ಹೆಚ್ಚುವರಿ ರಾಜ್ಯಕ್ಕೆ 300 ರೂ. ಶುಲ್ಕವನ್ನು ವಿಧಿಸಲಾಗುತ್ತದೆ.

ಕಳೆದ ಎರಡು ಹಣಕಾಸು ವರ್ಷಗಳ ಅವಧಿಯಲ್ಲಿ ತಾವು ಆಯ್ದುಕೊಂಡ ಚಟುವಟಿಕೆಗಳಿಗಾಗಿ ಕನಿಷ್ಠ 10 ಲಕ್ಷ ರೂಪಾಯಿಗಳ ವಿದೇಶಿ ವಂತಿಗೆಯನ್ನು ಖರ್ಚು ಮಾಡಿರಬೇಕು ಎಂಬ ಕನಿಷ್ಠ ವೆಚ್ಚದ ಮಿತಿಯನ್ನೂ ಸರ್ಕಾರ ಪರಿಚಯಿಸಿದೆ.

ಭಾರತೀಯ ಮೂಲದವರನ್ನು ಹೊರತುಪಡಿಸಿ, ವಿದೇಶಿ ನಾಗರಿಕರನ್ನು ಪ್ರಮುಖ ಪದಾಧಿಕಾರಿಗಳನ್ನಾಗಿ ಹೊಂದಿರುವ ಯಾವುದೇ ಸಂಸ್ಥೆಯನ್ನು ವಿದೇಶಿ ಹಣವನ್ನು ಪಡೆಯಲು ನೋಂದಣಿಗಾಗಿ “ಸಾಮಾನ್ಯವಾಗಿ ಪರಿಗಣಿಸಲಾಗುವುದಿಲ್ಲ” ಎಂದು ಗೃಹ ಸಚಿವಾಲಯ ತಿಳಿಸಿದೆ.

ಆದಾಗ್ಯೂ, ವಿದೇಶಿ ನಾಗರಿಕರು ಸ್ವಯಂಸೇವಾ ಸಂಸ್ಥೆಗಳ ಪ್ರಮುಖ ಪದಾಧಿಕಾರಿಗಳಾಗಲು ಅನುಮತಿಸಬಹುದಾದ ಪ್ರಕರಣಗಳು ಅಥವಾ ಸಂದರ್ಭಗಳನ್ನು ಕೇಂದ್ರ ಸರ್ಕಾರವು ನಿರ್ದಿಷ್ಟಪಡಿಸಬಹುದು.
ನಿಯಮಗಳು “ಪ್ರಮುಖ ಪದಾಧಿಕಾರಿ” (ಕೀ ಫಂಕ್ಷನರಿ) ಎಂಬುದರ ವ್ಯಾಖ್ಯಾನವನ್ನು ವಿಸ್ತರಿಸಿದ್ದು, ಕಂಪನಿಯ ನಿರ್ದೇಶಕರು, ಸಂಸ್ಥೆಗಳ ಪಾಲುದಾರರು, ಟ್ರಸ್ಟಿಗಳು, ಹಿಂದೂ ಅವಿಭಕ್ತ ಕುಟುಂಬದ ಕರ್ತ ಅಥವಾ ಮುಖ್ಯಸ್ಥರನ್ನು ಇದರಲ್ಲಿ ಸೇರಿಸಲಾಗಿದೆ.

ಈ ವರ್ಷದ ಆರಂಭದಲ್ಲಿ, ಕೇಂದ್ರ ಸರ್ಕಾರವು ವಿದೇಶಿ ವಂತಿಗೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕಾನೂನಿನ ಅಡಿಯಲ್ಲಿ ಎನ್‌ಜಿಒದ ನೋಂದಣಿ ಅವಧಿ ಮುಗಿದರೆ ಅದರ ವಿದೇಶಿ ಹಣ ಮತ್ತು ಆಸ್ತಿಗಳನ್ನು ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು.

ಪ್ರಸ್ತಾವಿತ ಚೌಕಟ್ಟಿನ ಅಡಿಯಲ್ಲಿ, ಅಂತಹ ಹಣ ಮತ್ತು ಆಸ್ತಿಗಳು ತಾತ್ಕಾಲಿಕವಾಗಿ ಸರ್ಕಾರದಿಂದ ನೇಮಕಗೊಂಡ “ನಿಯೋಜಿತ ಅಧಿಕಾರಿ”ಯ ವಶಕ್ಕೆ ಸೇರುತ್ತವೆ. ಸಂಸ್ಥೆಯು ನೋಂದಣಿಯನ್ನು ಮರಳಿ ಪಡೆಯಲು ವಿಫಲವಾದರೆ, ಸರ್ಕಾರದ ನಿಯಂತ್ರಣವು ಕಾಯಂ ಆಗುತ್ತದೆ. ನಂತರ ಈ ಆಸ್ತಿಗಳನ್ನು “ಸಾರ್ವಜನಿಕ ಉದ್ದೇಶಗಳಿಗಾಗಿ” ಬಳಸಲು, ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಅಧಿಕಾರಿಗೆ ಅಧಿಕಾರ ನೀಡಲಾಗುತ್ತದೆ.

2016-’17 ಮತ್ತು 2021-’22ರ ನಡುವೆ 6,600 ಕ್ಕೂ ಹೆಚ್ಚು ಎನ್‌ಜಿಒಗಳು ತಮ್ಮ ಎಫ್‌ಸಿಆರ್‌ಎ ಪರವಾನಗಿಗಳನ್ನು ಕಳೆದುಕೊಂಡಿವೆ ಎಂದು ಸರ್ಕಾರ 2022 ರ ಡಿಸೆಂಬರ್‌ನಲ್ಲಿ ಸಂಸತ್ತಿಗೆ ತಿಳಿಸಿತ್ತು. 2023 ರಲ್ಲಿ, 2019-’20 ಮತ್ತು 2021-’22ರ ನಡುವೆ 13,520 ನೋಂದಾಯಿತ ಸರಕಾರೇತರ ಸಂಸ್ಥೆಗಳು 55,741 ಕೋಟಿ ರೂಪಾಯಿ ವಿದೇಶಿ ವಂತಿಗೆಯನ್ನು ಸ್ವೀಕರಿಸಿವೆ ಎಂದು ಸಂಸತ್ತಿಗೆ ಮಾಹಿತಿ ನೀಡಿತ್ತು.