ಚಂದ್ರಶೇಖರ್ ಆಝಾದ್ ಕೊಲೆಯತ್ನ: ನಾಲ್ವರ ಬಂಧನ

0
518

ಸನ್ಮಾರ್ಗ ವಾರ್ತೆ

ಲಕ್ನೊ, ಜೂ.29: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್‍ರ ಮೇಲೆ ಗುಂಡು ಹಾರಿಸಿದ ಘಟನೆಯಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಉತ್ತರ ಪ್ರದೇಶದ ಶಹಾರನ್‍ಪುರದಲ್ಲಿ ಕಾರಿನಲ್ಲಿ ಬಂಧ ಅಜ್ಞಾತರು ಚಂದ್ರಶೇಖರ್ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳು ಬಳಸಿದ ಕಾರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕಾರು ಹರಿಯಾಣ ನೋಂದಣಿಯದ್ದು.

ಇದೇ ವೇಳೆ ಗುಂಡೇಟಿಗಾಗಿ ಆಸ್ಪತ್ರೆಯಲ್ಲಿರುವ ಚಂದ್ರ ಶೇಖರ್ ಆಝಾದ್‍ರ ವೀಡಿಯೊ ಹೊರಗೆ ಬಂದಿದೆ. ಇಂತಹ ದಾಳಿ ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದರು. ನನ್ನ ಗೆಳೆಯರು ಮತ್ತು ಪಾರ್ಟಿ ಕಾರ್ಯಕರ್ತರು ಶಾಂತಿ ಕಾಪಾಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

ನಮ್ಮ ಹೋರಾಟ ಮುಂದುವರಿಯಲಿದೆ. ಕೋಟ್ಯಂತರ ಜನರ ಪ್ರೀತಿ, ಪ್ರಾರ್ಥನೆಯಿಂದಾಗಿ ನಾನು ಈಗ ಸೌಖ್ಯವಾಗಿದ್ದೇನೆಂದು ಅವರು ಹೇಳಿದರು.

ಚಂದ್ರಶೇಖರ್ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಅವರ ಆಂತರಿಕ ಭಾಗಗಳಿಗೆ ಗಾಯವಾಗಿಲ್ಲ. ತಪಾಸಣೆಯ ನಂತರ ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಪೊಲೀಸಧಿಕಾರಿ ತಿಳಿಸಿದರು.

ಬುಧವಾರ ಉತ್ತರ ಪ್ರದೇಶದ ಶಹಾರನ್‍ಪುರ ಜಿಲ್ಲೆಯಲ್ಲಿ ಅವರ ವಾಹನದ ವ್ಯೂಹದ ಮೇಲೆ ಗುಂಡಿನ ದಾಳಿ ನಡೆದಿದೆ. ಚಂದ್ರಶೇಖರ್ ಆಝಾದ್‍ರ ಕಾರಿನ ವಿಂಡೊ ಗುಂಡು ದಾಳಿಯಲ್ಲಿ ಹಾನಿಗೊಂಡಿದೆ. ಶಹಾರನ್‍ಪುರದಲ್ಲಿ ಒಂದು ಕಾರ್ಯಕ್ರಮಕ್ಕೆ ಬಂದಾಗ ದಾಳಿ ನಡೆದಿದ್ದು ಚಂದ್ರಶೇಖರ್ ಕಾರಿನ ಡೋರಿಗೂ ಸೀಟುಗೂ ಗುಂಡು ತಾಗಿದ ಗುರುತುಗಳಿವೆ. ನಾಲ್ಕು ಬಾರಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.