ಹಮಾಸ್ ನಾಯಕರನ್ನು ಭಯೋತ್ಪಾದಕರು ಎಂದ ಚಾನೆಲ್ ನಿರೂಪಕ: ತನಿಖೆಗೆ ಆದೇಶಿಸಿದ ಸೌದಿ ಅರೇಬಿಯಾ

0
355

ಸನ್ಮಾರ್ಗ ವಾರ್ತೆ

ಹಮಾಸ್ ನಾಯಕರನ್ನು ಭಯೋತ್ಪಾದಕರು ಎಂದು ಕರೆದ ಚಾನೆಲ್ ನ ಮುಖ್ಯಸ್ಥರ ವಿರುದ್ಧ ಸೌದಿ ಮೀಡಿಯಾ ರೆಗ್ಯುಲೇಟರಿ ಅಥಾರಿಟಿಯು ತನಿಖೆಗೆ ಆದೇಶಿಸಿದೆ.

ಯಹ್ಯಾ ಸಿನ್ವಾರ್ ಹತ್ಯೆಗೆ ಸಂಬಂಧಿಸಿ ಸೌದಿಯ ಪ್ರಮುಖ ಟಿ ವಿ ಚಾನೆಲ್ ಹಮಾಸ್ ನಾಯಕರನ್ನು ಭಯೋತ್ಪಾದಕರು ಎಂದು ಹೇಳಿತ್ತು.

ಈ ಚಾನಲ್ ಹಮಾಸ್ ನಾಯಕರನ್ನು ಭಯೋತ್ಪಾದಕರು ಎಂದು ಕರೆದಿರುವುದು ಅರಬ್ ರಾಷ್ಟ್ರಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಇರಾಕ್ ನಲ್ಲಿರುವ ಈ ಚಾನಲ್ ನ ಕಚೇರಿಯ ಮುಂದೆ ಪ್ರತಿಭಟನೆಯೂ ವ್ಯಕ್ತವಾಯಿತು. ಆ ಬಳಿಕ ಈ ಚಾನೆಲ್ ನ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಆದರೆ ಚಾನೆಲ್ ನ ಹೆಸರನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿಲ್ಲ. ಸೌದಿಯ ಮಾಧ್ಯಮ ನಿಯಮಗಳನ್ನು ಪಾಲಿಸದವರ ವಿರುದ್ಧ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ಅಥಾರಿಟಿ ಹೇಳಿದೆ.

ಹಮಾಸ್ ನ ನಾಯಕರನ್ನು ಭಯೋತ್ಪಾದಕರು ಎಂದು ಕರೆದುದಕ್ಕಾಗಿ ಸೌದಿಯಲ್ಲಿಯೂ ತೀವ್ರ ವಿರೋಧ ವ್ಯಕ್ತವಾಗಿತ್ತು ಮತ್ತು ಸೋಶಿಯಲ್ ಮೀಡಿಯಾದಲ್ಲಿ ಚಾನೆಲ್ ನ ನಿಲುವನ್ನು ಪ್ರಶ್ನಿಸಲಾಗಿತ್ತು.

ಆದರೆ ಸೌದಿ ನಿಷೇಧಿಸಿರುವ ಸಂಘಟನೆಗಳ ಪಟ್ಟಿಯಲ್ಲಿ ಹಮಾಸ್ ಕೂಡ ಇದೆ. ಆದರೆ ಅಕ್ಟೋಬರ್ 7ರ ಬಳಿಕ ಹಮಾಸ್ ನ ವಿರುದ್ಧ ಸೌದಿ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಫೆಲೆಸ್ತೀನ್ ವಿಷಯಕ್ಕೆ ಸಂಬಂಧಿಸಿ ಇಸ್ರೇಲಿನ ಜೊತೆ ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ಈ ಮೊದಲು ಸೌದಿ ಅರೇಬಿಯಾ ಚರ್ಚೆ ನಡೆಸಿತ್ತು. ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗದೆ ಇಸ್ರೇಲ್ ನೊಂದಿಗೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳಲ್ಲ ಎಂದು ಸೌದಿ ಅರೇಬಿಯಾ ಹೇಳುವ ಮೂಲಕ ಮಾತುಕತೆಯನ್ನು ಕೊನೆಗೊಳಿಸಲಾಗಿತ್ತು.

1967ರ ಗಡಿಯ ಅನ್ವಯ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆ ಯಾಗುವವರೆಗೆ ಇಸ್ರೇಲ್ ನೊಂದಿಗೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳುವುದಿಲ್ಲ ಎಂದು ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಸ್ಪಷ್ಟಪಡಿಸಿದ್ದಾರೆ.