ಸನ್ಮಾರ್ಗ ವಾರ್ತೆ
ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನ ಅಂತಿಮ ಬಿ.ಎಸ್ಸಿ ವಿದ್ಯಾರ್ಥಿ ಚೇತನ್ ಎಂ ಅವರು ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರಗಳ (ಆರ್ಎಂಆರ್ಸಿಎನ್ಇ) ಪ್ರವೇಶಕ್ಕಾಗಿ ನಡೆಸುವ ಎಂಎಸ್ಸಿಯ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಾದ ‘ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್’ (ಐಸಿಎಂಆರ್) ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.
ದೇಶದಲ್ಲಿರುವ ಐದು ಆರ್ಎಂಆರ್ಸಿಎನ್ಇ ಕೇಂದ್ರಗಳ ಪ್ರವೇಶಕ್ಕಾಗಿ ನಡೆಸುವ ಪರೀಕ್ಷೆಯಲ್ಲಿ ಚಾಮರಾಜನಗರ ಮೂಲದ ಚೇತನ್ ಅವರು, ಅಸ್ಸಾಂನ ದಿಬ್ರುಗಢ್ನಲ್ಲಿರುವ ‘ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್’ಗೆ ಆಯ್ಕೆಯಾಗಿದ್ದಾರೆ. ಜೊತೆಗೆ ತಿಂಗಳಿಗೆ ₹20,000 ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದಾರೆ.
ಮಂಗಳೂರು ವಿವಿಯ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ ಕೆ ಅವರು ಚೇತನ್ ಅವರನ್ನು ಅಭಿನಂದಿಸಿದ್ದಾರೆ. ಆಗಸ್ಟ್ 14ರಂದು ಪುದುಚೇರಿಯಲ್ಲಿ ಪರೀಕ್ಷೆ ಬರೆದಿದ್ದ ಚೇತನ್, ಈ ಪರೀಕ್ಷೆಯ ಮೂಲಕ ಆರ್ಎಂಆರ್ಸಿಎನ್ಇಗೆ ಆಯ್ಕೆಯಾದ ದೇಶದ 34 ವಿದ್ಯಾರ್ಥಿಗಳಲ್ಲಿ ಚೇತನ್ ಕೂಡ ಒಬ್ಬರಾಗಿದ್ದಾರೆ.
ರೈತಾಪಿ ಕುಟುಂಬದವರಾದ ಇವರು ಮಹೇಶ್ ಎಂ ಮತ್ತು ಮಮತಾ ಎಂಬ ದಂಪತಿಗಳ ಹಿರಿಯ ಪುತ್ರ. ಚೇತನ್ ಐದನೇ ತರಗತಿಯಲ್ಲೇ ಪ್ರವೇಶ ಪರೀಕ್ಷೆ ಬರೆದು ಚಾಮರಾಜನಗರದ ಆದರ್ಶ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದರು. ರಾಷ್ಟ್ರಮಟ್ಟದ ನ್ಯಾಷನಲ್ ಮೀನ್ಸ್-ಕಮ್-ಮೆರಿಟ್ ಸ್ಕಾಲರ್ಶಿಪ್ (ಎನ್ಎಂಎಂಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಎಂಟನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ವರ್ಷಕ್ಕೆ ₹6,000 ವಿದ್ಯಾರ್ಥಿವೇತನ ಪಡೆದಿದ್ದರು.

ತನ್ನ ಸಾಧನೆಗೆ ಪ್ರೋತ್ಸಾಹಿಸಿದ ಪ್ರಾಂಶುಪಾಲೆ ಡಾ. ಅನಸೂಯಾ ರೈ, ಎಲ್ಲ ಪ್ರಾಧ್ಯಾಪಕರು, ವಿಶೇಷವಾಗಿ ಮಾರ್ಗದರ್ಶಕರಾದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದರಾಜು ಎಂ ಎನ್ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ನಾಗರತ್ನ ಅವರಿಗೆ ಚೇತನ್ ಧನ್ಯವಾದ ತಿಳಿಸಿದ್ದಾರೆ.
ಮೈಸೂರಿನ ಮಹಾರಾಜ ಪಿಯು ಕಾಲೇಜಿನಲ್ಲಿ ಪಿಯುಸಿ ಓದಿದ್ದ ಚೇತನ್, ನಂತರ ಬಿಎಸ್ಸಿ ಪದವಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ ಸೇರ್ಪಡೆಯಾಗಿದ್ದರು.












