ಛತ್ತೀಸ್‍ಗಡ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಮುಸ್ಲಿಮ್ ಮಹಾ ಸಭಾ ಆಗ್ರಹ

0
211

ಸನ್ಮಾರ್ಗ ವಾರ್ತೆ

ಛತ್ತೀಸ್‍ಗಡ, ಜು.8: ಮುಸ್ಲಿಂ ಸಮುದಾಯದ ಸದಸ್ಯರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ. ಮುಸ್ಲಿಂ ಮಹಾಸಭಾದ ಸದಸ್ಯ ಫಹೀಂ ಶೇಖ್ ಈ ಬೇಡಿಕೆ ಮಂಡಿಸಿ, ಗೋವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡುವ ಮೂಲಕ ದೇಶಾದ್ಯಂತ ನಡೆಯುತ್ತಿರುವ ಗೋವು ಕಳ್ಳಸಾಗಾಣಿಕೆಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದ್ದಾರೆ.

‘ದೇಶದಾದ್ಯಂತ ಗೋವು ಕಳ್ಳಸಾಗಾಣಿಕೆ ವ್ಯಾಪಕವಾಗುತ್ತಿರುವಂತೆಯೇ, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಮೂಲಕ ಅದನ್ನು ನಿಯಂತ್ರಿಸುವ ಅಗತ್ಯವಿದೆ’ ಎಂದು ಗುರುವಾರ ಮುಸ್ಲಿಂ ಸಮಾಜ ನಡೆಸಿದ ಸಭೆಯಲ್ಲಿ ಶೇಖ್ ಹೇಳಿದರು.

ಛತ್ತೀಸ್‍ಗಢದ ಮುಖ್ಯಮಂತ್ರಿ ವಿಷ್ಮುದೇವ್ ಸಾಯಿ ಈ ಬೇಡಿಕೆಗೆ ಪ್ರತಿಕ್ರಿಯಿಸಿ, “ನಾವು ಸನಾತನಿಗಳು. ನಾವು ಹಸುವನ್ನು ನಮ್ಮ ತಾಯಿಯೆಂದು ಭಾವಿಸುತ್ತೇವೆ ಮತ್ತು ಅದರಂತೆ ಪೂಜಿಸುತ್ತೇವೆ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು “ಗೋಮಾಂಸ ರಫ್ತಿನಲ್ಲಿ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಡಬಲ್ ಇಂಜಿನ್ ಸರ್ಕಾರಕ್ಕೆ ಕ್ರೆಡಿಟ್ ಸಲ್ಲುತ್ತದೆ. ರಫ್ತುದಾರರಿಂದ ದೇಣಿಗೆ ತೆಗೆದುಕೊಳ್ಳಲಾಗುತ್ತದೆ. ಎಂದು ಹೇಳಿದರು.

‘ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಹಾಗೂ ಗೋವು ಕಳ್ಳಸಾಗಾಣಿಕೆಯನ್ನು ಸಂಪೂರ್ಣ ನಿಷೇಧಿಸಬೇಕು’ ಎಂದು ಒತ್ತಾಯಿಸಿ ರಾಷ್ಟ್ರಪತಿ ಹಾಗೂ ಪ್ರಧಾನಿ ಅವರನ್ನು ಭೇಟಿ ಮಾಡಲಿದ್ದೇವೆ’ ಎಂದು ಮುಸ್ಲಿಂ ಮಹಾಸಭಾದ ಸದಸ್ಯರು ಹೇಳಿದ್ದಾರೆ.

ದೇಶದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ ಎಂದು ಮುಸ್ಲಿಂ ಸಮಾಜ ಭಾವಿಸುತ್ತಿದೆ ಎಂದು ಹೇಳಿದರು. ನಮ್ಮ ಮಾನಹಾನಿ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಕೆಲವು ಕಿಡಿಗೇಡಿಗಳು ನಮ್ಮ ಸಮುದಾಯದ ಹೆಸರನ್ನು ಹಾಳು ಮಾಡುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸಲು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ನಾವು ಒತ್ತಾಯಿಸುತ್ತೇವೆ, ”ಎಂದು ಸದಸ್ಯರು ಇತ್ತೀಚೆಗೆ ಆರಂಗದಲ್ಲಿ ಗೋಸಾಗಾಟದ ವೇಳೆ ನಡೆದ ಹತ್ಯೆ ಘಟನೆಯನ್ನು ಉಲ್ಲೇಖಿಸಿ ಹೇಳಿದರು.

ಜೂನ್ 7 ರಂದು ಚಾಂದ್ ಮಿಯಾ ಮತ್ತು ಗುಡ್ಡು ಖಾನ್ ಎಂಬ ಇಬ್ಬರನ್ನು ಗೋರಕ್ಷಕರು ಬರ್ಬರವಾಗಿ ಹೊಡೆದು ಕೊಂದರು. ಹತ್ಯೆಗೊಳಗಾದವರು ಟ್ರಕ್‍ನಲ್ಲಿ ಎಮ್ಮೆಗಳನ್ನು ಸಾಗಿಸುತ್ತಿದ್ದಾಗ ಅರಾಂಗ್‍ನಲ್ಲಿ ಅಡ್ಡಗಟ್ಟಿ ಗೋರಕ್ಷಕ ಗೂಂಡಾಗಳು ದಾಳಿ ನಡೆಸಿದ್ದಾರೆ. ನಂತರ ಅವರ ಶವಗಳು ಮಹಾನದಿಯಲ್ಲಿ ಪತ್ತೆಯಾಗಿವೆ.

ಮುಸ್ಲಿಂ ಮಹಾ ಸಭಾದ ಪ್ರಸ್ತಾವನೆಯನ್ನು ಶ್ಲಾಘಿಸಿದ ಬಿಜೆಪಿ ನಾಯಕ ತೌಕೀರ್ ರಝಾ , “ಇದು ಮುಸ್ಲಿಂ ಸಮುದಾಯದ ಅತ್ಯಂತ ಒಳ್ಳೆಯ ನಿರ್ಧಾರ. ಗೋಹತ್ಯೆ ಪ್ರಕರಣಗಳು ಬಂದಾಗ ಅದು ನೇರವಾಗಿ ನಮ್ಮ ಸಮುದಾಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ನಾನು ಸಮುದಾಯದವರಲ್ಲಿ ಮನವಿ ಮಾಡುತ್ತೇನೆ ಎಂದು ರಝಾ ಹೇಳಿದರು.