‘ಚೌಕಿದಾರ್ ಚೋರ್ ಹೈ’ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ

0
259

ಸನ್ಮಾರ್ಗ ವಾರ್ತೆ

ಹೊಸದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಚೌಕಿದಾರ್ ಚೋರ್ ಹೈ’ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ವಿಚಾರಣಾ ನ್ಯಾಯಾಲಯದ ನಡಾವಳಿಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ನಿರಾಕರಿಸಿದ ಬಾಂಬೈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳೊಳಗೆ ಪ್ರತ್ಯುತ್ತರ ಸಲ್ಲಿಸುವಂತೆ ನಿರ್ದೇಶಿಸಿದೆ.

“ನೋಟಿಸ್ ಜಾರಿಗೊಳಿಸಲಾಗುತ್ತಿದೆ. ನಾಲ್ಕು ವಾರಗಳಲ್ಲಿ ಪ್ರತ್ಯುತ್ತರ ಸಲ್ಲಿಸಬೇಕು. ವಿಚಾರಣಾ ನ್ಯಾಯಾಲಯದ ಮುಂದಿನ ನಡಾವಳಿಗಳಿಗೆ ತಡೆ ನೀಡಲಾಗಿದೆ,” ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರಿದ್ದ ಪೀಠವು ಆದೇಶಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಾಹುಲ್ ಗಾಂಧಿ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಸುಪ್ರೀಂ ಕೋರ್ಟ್ ಈಗಾಗಲೇ ಈ ವಿಷಯದ ಕುರಿತು ಕಾನೂನು ನಿಲುವನ್ನು ಸ್ಪಷ್ಟಪಡಿಸಿದೆ ಎಂದು ವಾದಿಸಿದರು.

2019 ರಲ್ಲಿ ರಾಹುಲ್ ಗಾಂಧಿಗೆ ಜಾರಿ ಮಾಡಲಾಗಿದ್ದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೈ ಹೈಕೋರ್ಟ್ ಸೆಪ್ಟೆಂಬರ್ 8 ರಂದು ವಜಾಗೊಳಿಸಿತ್ತು. 2019 ರ ಆಗಸ್ಟ್ 28 ರಂದು ಗಿರ್ಗಾಂವ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶದ ವಿರುದ್ಧ ರಾಹುಲ್ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಅವಕಾಶ ನೀಡುವ ಸಲುವಾಗಿ ದೂರಿನ ನಡಾವಳಿಗಳನ್ನು ಮುಂದೂಡಿದ್ದ 2021 ರ ಆದೇಶವನ್ನು ಹೈಕೋರ್ಟ್ ಆರು ವಾರಗಳ ಕಾಲ ವಿಸ್ತರಿಸಿತ್ತು.

2018 ರ ಸೆಪ್ಟೆಂಬರ್ 20 ರಂದು ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತ ಮಹೇಶ್ ಶ್ರೀಶ್ರೀಮಲ್ ದೂರು ದಾಖಲಿಸಿದ್ದರು. ಬಿಜೆಪಿಯ ಸದಸ್ಯನಾಗಿ, ಪಕ್ಷದ ನಾಯಕನ ವಿರುದ್ಧ ಮಾಡಿದ ಹೇಳಿಕೆಗಳು ತಮಗೆ ಮಾನನಷ್ಟ ಉಂಟುಮಾಡಿವೆ ಎಂದು ಶ್ರೀಶ್ರೀಮಲ್ ವಾದಿಸಿದ್ದರು.

ರಾಹುಲ್ ಗಾಂಧಿ ಅವರ ಹೇಳಿಕೆಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾನಹಾನಿಕರವಾಗಿದ್ದು, ಬಿಜೆಪಿ ಸದಸ್ಯರು ಮತ್ತು ಮೋದಿ ಅವರೊಂದಿಗೆ ಗುರುತಿಸಿಕೊಂಡಿರುವ ಭಾರತೀಯ ನಾಗರಿಕರ ವಿರುದ್ಧ ಆರೋಪಗಳನ್ನು ಮಾಡಿದಂತೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.