ಸನ್ಮಾರ್ಗ ವಾರ್ತೆ
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (ಎಫ್ಸಿಆರ್ಎ) ತಿದ್ದುಪಡಿ ತರುವ ಮೂಲಕ ಭಾರತೀಯ ಸಂಸತ್ತು ಚರ್ಚ್ಗಳು ಮತ್ತು ಧರ್ಮದತ್ತಿ ಸಂಸ್ಥೆಗಳ ನಿಯಂತ್ರಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ಸದಸ್ಯ ರಿಲೇ ಮೂರ್ ಮಂಗಳವಾರ ಆರೋಪಿಸಿದ್ದಾರೆ. ಮಸೂದೆಯ ಕರಡು ಅಂಗೀಕಾರವಾದರೆ ಅದು ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ಸಂಬಂಧಕ್ಕೆ ಧಕ್ಕೆ ತರಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಯಾವುದೇ ಲಾಭರಹಿತ ಸಂಸ್ಥೆಯು ವಿದೇಶಿ ನಿಧಿಗಳನ್ನು ಸ್ವೀಕರಿಸಲು ಕಾಯ್ದೆಯಡಿಯಲ್ಲಿ ನೋಂದಣಿ ಕಡ್ಡಾಯವಾಗಿದೆ.
ನಮ್ಮ ಕರ್ತನಾದ ಯೇಸು ಕ್ರಿಸ್ತನ ಪುನರುತ್ಥಾನದ ಕೆಲವೇ ದಶಕಗಳ ನಂತರ ಸೇಂಟ್ ಥಾಮಸ್ ಅಪೋಸ್ಟಲ್ ಮಲಬಾರ್ ಕರಾವಳಿಗೆ ಪ್ರಯಾಣ ಬೆಳೆಸಿದಾಗಿನಿಂದಲೂ ಕ್ರಿಶ್ಚಿಯನ್ನರು ಭಾರತದಲ್ಲಿದ್ದಾರೆ ಎಂದು ಮೂರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಈ ಸುದೀರ್ಘ ಇತಿಹಾಸದ ಹೊರತಾಗಿಯೂ, “ಚರ್ಚ್ಗಳು ಮತ್ತು ಧರ್ಮದತ್ತಿ ಸಂಸ್ಥೆಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಅನುಮತಿಸುವ” ನಿಯಮಗಳನ್ನು ತಿದ್ದುಪಡಿ ಮಾಡಲು ಭಾರತದ ಸಂಸತ್ತು ಪರಿಗಣಿಸುತ್ತಿದೆ ಎಂದು ಅವರು ಸೇರಿಸಿದ್ದಾರೆ.
“ಇದು ಕ್ರಿಶ್ಚಿಯನ್ನರ ಮೇಲಿನ ಸ್ಪಷ್ಟ ದಾಳಿಯಾಗಿದೆ” ಎಂದು ವೆಸ್ಟ್ ವರ್ಜೀನಿಯಾದ ರಿಪಬ್ಲಿಕನ್ ಪ್ರತಿನಿಧಿ ಹೇಳಿದರು. “ಈ ಮಸೂದೆಯು ಈ ರೀತಿಯಲ್ಲಿ ಮುಂದುವರಿದರೆ, ಇದು ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಮುಖ ಕಳಳವಳದ ವಿಷಯವಾಗಲಿದೆ.”
ಈ ವಿಷಯದ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಸೂದೆಯನ್ನು ಮಾರ್ಚ್ನಲ್ಲಿ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸಲಾಯಿತು ಆದರೆ ಸಂಸತ್ತಿನ ಯಾವುದೇ ಸದನದಿಂದ ಅನುಮೋದನೆಗೊಂಡಿಲ್ಲ.
ಪ್ರಸ್ತಾವಿತ ಬದಲಾವಣೆಗಳು
ಕರಡು ಮಸೂದೆಯ ಪ್ರಮುಖ ನಿಬಂಧನೆಯು, ಸರ್ಕಾರೇತರ ಸಂಸ್ಥೆಯೊಂದರ ಎಫ್ಸಿಆರ್ಎ ನೋಂದಣಿಯು ಅವಧಿ ಮೀರಿದರೆ ಅಥವಾ ರದ್ದಾದರೆ ಅದರ ವಿದೇಶಿ ನಿಧಿಗಳು ಮತ್ತು ಸ್ವತ್ತುಗಳ ನಿಯಂತ್ರಣವನ್ನು ತೆಗೆದುಕೊಳ್ಳಲು ಕೇಂದ್ರಕ್ಕೆ ಅವಕಾಶ ನೀಡುತ್ತದೆ.
ಪ್ರಸ್ತಾವಿತ ನೀತಿಯ ಅಡಿಯಲ್ಲಿ, ಅಂತಹ ನಿಧಿಗಳು ಮತ್ತು ಸ್ವತ್ತುಗಳು ಸರ್ಕಾರ ನೇಮಿಸಿದ “ನಿರ್ದಿಷ್ಟ ಪ್ರಾಧಿಕಾರದಲ್ಲಿ” ತಾತ್ಕಾಲಿಕವಾಗಿ ಉಳಿಯುತ್ತದೆ. ಸಂಸ್ಥೆಯು ನೋಂದಣಿಯನ್ನು ಮರುಪಡೆಯುವಲ್ಲಿ ವಿಫಲವಾದರೆ, ಈ ನಿಯಂತ್ರಣವು ಶಾಶ್ವತವಾಗುತ್ತದೆ. ಆಗ ಪ್ರಾಧಿಕಾರವು ಈ ಸ್ವತ್ತುಗಳನ್ನು “ಸಾರ್ವಜನಿಕ ಉದ್ದೇಶಗಳಿಗಾಗಿ” ಬಳಸಲು, ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಅಧಿಕಾರ ಹೊಂದಿದೆ.
ಈ ನಿಬಂಧನೆಯು ಕೇವಲ ಚರ್ಚ್ಗಳಿಗೆ ಮಾತ್ರವಲ್ಲದೆ ಎಲ್ಲಾ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಪ್ರಸ್ತಾವಿತ ತಿದ್ದುಪಡಿಯು ಪೂಜಾ ಸ್ಥಳದ ಧರ್ಮದ ಸ್ವರೂಪವನ್ನು ಸಂರಕ್ಷಿಸಲಾಗುವುದು ಎಂದು ನಿರ್ದಿಷ್ಟಪಡಿಸುತ್ತದೆ.
ಪ್ರಸ್ತಾವಿತ ಕಾನೂನನ್ನು “ಅಪಾಯಕಾರಿ” ಮತ್ತು “ draconian (ಕಠಿಣವಾದ)” ಎಂದು ಬಣ್ಣಿಸಿ ವಿರೋಧ ಪಕ್ಷದ ಸಂಸತ್ ಸದಸ್ಯರು ವಿರೋಧಿಸಿದ್ದಾರೆ. ನಾಗರಿಕ ಸಮಾಜದ ಗುಂಪುಗಳು ಸಹ ಈ ಬದಲಾವಣೆಗಳು ಎನ್ಜಿಒಗಳ ಮೇಲೆ ರಾಜ್ಯದ ನಿಯಂತ್ರಣವನ್ನು ವಿಸ್ತರಿಸುತ್ತವೆ ಎಂದು ಮಸೂದೆಯನ್ನು ಟೀಕಿಸಿವೆ.
2016-17 ಮತ್ತು 2021-22 ರ ನಡುವೆ 6,600 ಕ್ಕೂ ಹೆಚ್ಚು ಎನ್ಜಿಒಗಳು ತಮ್ಮ ಎಫ್ಸಿಆರ್ಎ ಪರವಾನಗಿಗಳನ್ನುಳೆದುಕೊಂಡಿವೆ ಎಂದು ಸರ್ಕಾರವು ಡಿಸೆಂಬರ್ 2022 ರಲ್ಲಿ ಸಂಸತ್ತಿಗೆ ತಿಳಿಸಿತ್ತು. 2019-20 ಮತ್ತು 2021-22 ರ ನಡುವೆ 13,520 ನೋಂದಾಯಿತ ಲಾಭರಹಿತ ಸಂಸ್ಥೆಗಳು ರೂ. 55,700 ಕೋಟಿಗಳಿಗೂ ಹೆಚ್ಚು ವಿದೇಶಿ ದೇಣಿಗೆಗಳನ್ನು ಪಡೆದಿವೆ ಎಂದು ಅದು 2023 ರಲ್ಲಿ ಸಂಸತ್ತಿಗೆ ತಿಳಿಸಿತ್ತು.












