ಸನ್ಮಾರ್ಗ ವಾರ್ತೆ
ಬೆಂಗಳೂರು: ಸೋಮವಾರ ಬೆಳಗ್ಗೆ ಜಿಮ್ ಗೆಂದು ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಾಧ್ಯಮ ಕಾರ್ಯದರ್ಶಿ ಗುರುಲಿಂಗಸ್ವಾಮಿ ಹೊಳಿಮಠ ಅವರು ಕುಸಿದು ಬಿದ್ದು ನಿಧನರಾಗಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು.
ಬೆಳಗ್ಗೆ ಜಿಮ್ ಗೆ ಹೋಗಿ ವರ್ಕೌಟ್ ಮಾಡುವಾಗ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ನಾಗರಬಾವಿಯ ಯುನಿಟಿ ಲೈಫ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ನಿಧನರಾದರು ಎಂದು ತಿಳಿದು ಬಂದಿದೆ.
ಬೊಮ್ಮಾಯಿ ಗೃಹ ಸಚಿವರಾದಾಗಿನಿಂದ ಮಾಧ್ಯಮ ವಿಭಾಗದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಗುರುಲಿಂಗ ಸ್ವಾಮಿ ಅವರು, ಬೊಮ್ಮಾಯಿ ಸಿಎಂ ಆದ ಬಳಿಕ ಮಾಧ್ಯಮ ಸಂಯೋಜಕರಾಗಿ ನೇಮಕಗೊಂಡಿದ್ದರು.
ವಿಜಯ ಕರ್ನಾಟಕ, ಕನ್ನಡ ಪ್ರಭ, ವಿಜಯವಾಣಿ, ಟಿವಿ5, ಈಟಿವಿ ಸೇರಿದಂತೆ ಹಲವು ಪತ್ರಿಕೆ, ಚಾನೆಲ್ ಗಳಲ್ಲಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದರು.
ಮೃತರು ಪತ್ನಿ ದೀಪಾ ಹೊಳಿಮಠ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಸಂತಾಪ ಸೂಚಿಸಿದ್ದಾರೆ.












