ವಾರಾಂತ್ಯ ಲಾಕ್ಡೌನ್ ವಿರೋಧಿಸಿ ವ್ಯವಹಾರ ನಡೆಸಲು ತೀರ್ಮಾನಗೈದ ಕರಾವಳಿ ವರ್ತಕರು

0
1768

ಸನ್ಮಾರ್ಗ ವಾರ್ತೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸತತವಾಗಿ ವಾರಾಂತ್ಯ ಲಾಕ್ಡೌನ್ ಮುಂದುವರಿಸುತ್ತಿರುವುದರಿಂದ ಜನ ಸಾಮಾನ್ಯರಿಗೂ ಕೆಲವರ್ಗದ ವ್ಯಾಪಾರಿಗಳಿಗೂ ತೀವ್ರ ತೊಂದರೆಯಾಗಿದ್ದು ಅವೈಜ್ಞಾನಿಕ ಮತ್ತು ತಾರತಮ್ಯಗಳಿಂದ ಕೂಡಿದ ಈ ನಿರ್ಧಾರವನ್ನು ಪ್ರತಿಭಟಿಸಿ ಅಂಗಡಿ ತೆರೆದು ವ್ಯವಹಾರ ನಡೆಸಲು ಕರಾವಳಿ ಜಿಲ್ಲೆಗಳ ಜವುಳಿ, ಪಾದರಕ್ಷೆ, ಫ್ಯಾನ್ಸಿ ಮುಂತಾದ ಅಂಗಡಿಗಳ ಮಾಲೀಕರು ನಿನ್ನೆ ನಡೆದ ಸಂಘದ ವಿಶೇಷ ಮಹಾ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ. ಪ್ರತೀ ಅಂಗಡಿಯವರು ಕೋವಿಡ್ 19 ರ ನಿಯಮ ಪಾಲಿಸಲು ಕಡ್ಡಾಯ ಸೂಚನೆ ನೀಡಲಾಗಿದೆ.

ಸಭೆಯಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಾಮಾಜಿಕ ಹೋರಾಟಗಾರ ಎಂ. ಜಿ. ಹೆಗಡೆಯವರು ಮಾತನಾಡಿ, ಲಾಕ್ಡೌನ್ ಹೇರುವ ನಿರ್ಧಾರದ ಹಿಂದೆ ಆನ್ ಲೈನ್ ವ್ಯಾಪಾರದ ದೈತ್ಯ ಶಕ್ತಿಗಳ ಕೈವಾಡವಿದೆ ಎಂಬ ಶಂಕೆ ವ್ಯಕ್ತಪಡಿಸಿದರು.

ಹಿರಿಯ ವರ್ತಕರಾದ ಸಯೀದ್ ಇಸ್ಮಾಯಿಲ್, ಟೆರೇನ್ ಡಿ ಸೋಜ, ಸುಲೋಚನಾ ಭಟ್, ಗೋಪಾಲ್ ಆರ್. ಎಚ್. , ಹರೀಶ್ ಶೆಣೈ, ರವಿ ಹೆಗ್ಡೆ, ಅಬ್ದುಲ್ ಮುನೀರ್, ವಿನೋದ್, ಪ್ರಸಾದ್ ನಾಯರ್, ಸುಲೈಮಾನ್ ಸಾಗರ್ ರೆಹಮಾನ್ ಮುಂತಾದವರು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಸಂತೋಷ್ ಕಾಮತ್ ಮಾತನಾಡಿ, ವರ್ತಕರು ಅತ್ಯಂತ ಕಷ್ಟದಲ್ಲಿದ್ದು ಅವರನ್ನು ಅವಲಂಬಿಸಿರುವ ಸಿಬ್ಬಂದಿಗಳ ಕುಟುಂಬಗಳ ಮೇಲೂ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಕುಟುಂಬಗಳ ಬದುಕಿನ ಪ್ರಶ್ನೆಯಾಗಿರುವುದರಿಂದ ಅನಿವಾರ್ಯವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಯಾರೂ ಆತಂಕ ಭಯಕ್ಕೆ ಒಳಗಾಗಬಾರದು ಎಂದು ಹೇಳಿದರು.