‘ವಂದೇ ಮಾತರಂ’ ಹಾಡಿನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವುದಾಗಿ ಕಾಂಗ್ರೆಸ್‌ ಹೇಳಿಕೆ

0
207

ಸನ್ಮಾರ್ಗ ವಾರ್ತೆ

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಹಾಡಿನ ಮೊದಲ ಎರಡು ಪ್ಯಾರಗಳನ್ನು ಮಾತ್ರ ಹಾಡುವುದಾಗಿ ಬುಧವಾರ ಕಾಂಗ್ರೆಸ್ ತಿಳಿಸಿದೆ. 1937ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಪಕ್ಷವು ಇದೇ ವೇಳೆ ಉಲ್ಲೇಖಿಸಿದೆ.

ಈ ನಿರ್ಣಯದ ಅನ್ವಯ ವಂದೇ ಮಾತರಂ ಗೀತೆಯ ಮೊದಲ ಎರಡು ಪ್ಯಾರಗಳನ್ನು ರಾಷ್ಟ್ರೀಯ ಹಾಡಾಗಿ ಅಳವಡಿಸಿಕೊಳ್ಳಲಾಗಿತ್ತು. ಉಳಿದ ನಾಲ್ಕು ಪ್ಯಾರಗಳಲ್ಲಿ ಹಿಂದೂ ದೇವತೆಯರಾದ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯರನ್ನು ಸ್ಮರಿಸಿರುವುದರಿಂದ ಅವುಗಳನ್ನು ಕೈಬಿಡಲಾಗಿತ್ತು ಎಂದು ತಿಳಿಸಲಾಗಿದೆ.

ಬುಧವಾರ ನಡೆದ ಕಾರ್ಯಕಾರಿ ಸಮಿತಿಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ನಿಲುವಿನ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ರವೀಂದ್ರನಾಥ ಟಾಗೋರ್, ಸುಭಾಷ್ ಚಂದ್ರ ಬೋಸ್ ಮತ್ತು ಸರ್ದಾರ್ ಪಟೇಲ್ ಅವರು ವಂದೇ ಮಾತರಂ ಹಾಡುವುದನ್ನು ಮೊದಲ ಎರಡು ಪ್ಯಾರಗಳಿಗೆ ಮಿತಗೊಳಿಸಲು ತೆಗೆದುಕೊಂಡ ನಿರ್ಧಾರಗಳಿಗೆ ಪಕ್ಷವು ಬದ್ಧವಾಗಿರುತ್ತದೆ ಎಂದು ಅವರು ಹೇಳಿದರು.

ದೆಹಲಿಯಲ್ಲಿ ನಡೆದ ಪಕ್ಷದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ವಂದೇ ಮಾತರಂ ಹಾಡುವುದಕ್ಕೆ ಅಡ್ಡಿಪಡಿಸಿದರು ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದ ನಂತರ ವಿವಾದ ಭುಗಿಲೆದ್ದಿತ್ತು.

ಕಾರ್ಯಕ್ರಮದ ವೀಡಿಯೊದಲ್ಲಿ ಪೂರ್ಣ ಪ್ರಮಾಣದ ವಂದೇ ಮಾತರಂ ಹಾಡು ಧ್ವನಿಸುತ್ತಿರುವಾಗ ಸೋನಿಯಾ ಗಾಂಧಿ ಅವರು ಪಕ್ಷದ ಕಾರ್ಯಕರ್ತರೊಬ್ಬರೊಂದಿಗೆ ಸನ್ನೆ ಮಾಡುತ್ತ ಮಾತನಾಡುತ್ತಿರುವುದು ಕಂಡುಬಂದಿತ್ತು. ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿರಲಿಲ್ಲ.

ರಾಷ್ಟ್ರೀಯ ಹಾಡಿನ ಗಾಯನಕ್ಕೆ ಇಬ್ಬರೂ ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದ್ದು, ಆ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಸೋಮವಾರ ದೆಹಲಿ ಪೊಲೀಸ್ ತಿಳಿಸಿದೆ.

ರಾಷ್ಟ್ರೀಯ ಹಾಡಿಗೆ ಅವಮಾನ ಮಾಡುವುದನ್ನು ಅಪರಾಧವೆಂದು ಪರಿಗಣಿಸುವ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ತಿದ್ದುಪಡಿ ಕಾಯ್ದೆ’ ಜಾರಿಗೆ ಬಂದ ಕೆಲವು ದಿನಗಳ ಬಳಿಕ ಈ ಘಟನೆ ನಡೆದಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ್, ವಂದೇ ಮಾತರಂ ಹಾಗೂ ರಾಷ್ಟ್ರಗೀತೆಗೆ ಸಂಬಂಧಿಸಿದ ವಿಷಯಗಳನ್ನು ಬಿಜೆಪಿ ರಾಜಕೀಯ ವಿಷಯಗಳನ್ನಾಗಿ ಪರಿವರ್ತಿಸುತ್ತಿದೆ ಎಂದು ಆರೋಪಿಸಿದರು.

ಜನವರಿ 28 ರಂದು ಕೇಂದ್ರ ಗೃಹ ಸಚಿವಾಲಯವು, ವಂದೇ ಮಾತರಂ ಅನ್ನು ರಾಷ್ಟ್ರಗೀತೆ ‘ಜನ ಗಣ ಮನ’ ಜೊತೆಗೆ ನುಡಿಸುವಾಗ ಅದರ ಎಲ್ಲಾ ಆರು ಪ್ಯಾರಗಳನ್ನು ಮೊದಲು ಹಾಡಬೇಕೆಂದು ನಿರ್ದೇಶನ ನೀಡಿತ್ತು. ಅದಕ್ಕೂ ಮುಂಚೆ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಹಾಡಿನ ಮೊದಲ ಎರಡು ಪ್ಯಾರಗಳನ್ನು ಮಾತ್ರ ನುಡಿಸಲಾಗುತ್ತಿತ್ತು.

ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಓಲೈಸಲು ನಾಲ್ಕು ಪ್ಯಾರಗಳನ್ನು ಕೈಬಿಡಲು ಸಮ್ಮತಿಸಿತ್ತು ಎಂದು ಬಿಜೆಪಿ ಬಹಳ ಹಿಂದಿನಿಂದಲೂ ಆರೋಪಿಸುತ್ತ ಬಂದಿದೆ.