ಆರೆಸ್ಸೆಸ್ ಭದ್ರಕೋಟೆ ನಾಗ್ಪುರದಲ್ಲಿ ಗೆದ್ದ ಕಾಂಗ್ರೆಸ್: ಫಡ್ನವಿಸ್‌ಗೆ ಮುಖಭಂಗ

0
243

ಸನ್ಮಾರ್ಗ ವಾರ್ತೆ

ಮುಂಬಯಿ:‌ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್‌ಎಸ್‌ಎಸ್ ಭದ್ರಕೋಟೆಯಾದ ನಾಗ್ಪುರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಜಯ ಸಾಧಿಸಿದೆ. ನಾಗ್ಪುರದಲ್ಲಿ ಆರ್‌ಎಸ್‌ಎಸ್ ಕೇಂದ್ರ ಕಚೇರಿಯನ್ನು ಹೊಂದಿದೆ. ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸ್ವಂತ ಕ್ಷೇತ್ರವಾಗಿದೆ. ಈ ಸಲದ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ನಾಗ್ಪುರ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ಗೋವಿಂದರಾವ್ ವಂಜಾರಿ, ಬಿಜೆಪಿಯ ಸುಧಾಕರ್ ಕೋಹಳೆ ಅವರನ್ನು ಸೋಲಿಸಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ನಾಗ್ಪುರ ಕ್ಷೇತ್ರದಲ್ಲಿ 2020ರಲ್ಲಿ ಗೆಲುವು ಸಾಧಿಸಿದ್ದ ಅಭಿಜಿತ್ ವಂಜಾರಿ, ಈ ಬಾರಿಯೂ 3,271 ಮತಗಳ ಅಂತರದಿಂದ ಜಯಗಳಿಸಿ ಕಾಂಗ್ರೆಸ್‌ಗೆ ಹೆಮ್ಮೆಯ ಸಾಧನೆ ತಂದುಕೊಟ್ಟಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಪ್ರಮುಖ ರಾಜಕೀಯ ಭದ್ರಕೋಟೆಯಲ್ಲೇ ಆಡಳಿತ ಪಕ್ಷ ಅನುಭವಿಸಿದ ಈ ಸೋಲು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರದ 5 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷ ಮಹಾವಿಕಾಸ್ ಅಘಾಡಿ 3 ಸ್ಥಾನಗಳನ್ನು ಗೆದ್ದುಕೊಂಡರೆ, ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ 2 ಸ್ಥಾನಗಳು ಮಾತ್ರ ಲಭಿಸಿವೆ. ಚುನಾವಣೆಯ ಸಂಪೂರ್ಣ ಫಲಿತಾಂಶ ಹೊರಬರುವ ಮುನ್ನವೇ ಕಾಂಗ್ರೆಸ್ ಅನ್ನು ಪರಿಹಾಸ್ಯ ಮಾಡಿ ಪೋಸ್ಟ್ ಹಂಚಿಕೊಂಡು, ನಂತರ ಫಲಿತಾಂಶ ಬರುತ್ತಿದ್ದಂಗೆ ಅದನ್ನು ಡಿಲೀಟ್ ಮಾಡಬೇಕಾಗಿ ಬಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುಖಭಂಗಕ್ಕೊಳಗಾಗಿದ್ದಾರೆ. ಕಾಂಗ್ರೆಸ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.