ಅಮೆರಿಕ ಮರಳಿಸಿದವರಲ್ಲಿ ಕೊರೊನಾ ವ್ಯಾಪಕ; ಆತಂಕದಲ್ಲಿ ಬಡ ದೇಶಗಳು; ವಿಮಾನದಲ್ಲಿ ವೈರಸ್ ರಫ್ತ್ತು ಮಾಡಿದ ಅಮೇರಿಕ ಎಂದ ಮಾನವ ಹಕ್ಕು ಕಾರ್ಯಕರ್ತರು

0
820

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಎ. 21: ಕೊರೊನಾ ವ್ಯಾಪಿಸುತ್ತಿರುವ ವೇಳೆ ಅಮೆರಿಕದಿಂದ ವಾಪಸು ಕಳುಹಿಸಿದ ಹೈಟಿ, ಗ್ವಾಟಮಾಲ, ಮೆಕ್ಸಿಕೊದ ಪ್ರಜೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ರೋಗ ದೃಢಪಟ್ಟಿದೆ. ಕೊರೊನಾ ರೋಗ ಕಡಿಮೆ ಇರುವ ಈ ಬಡ ದೇಶಗಳಲ್ಲಿ ಇದು ಈಗ ದೊಡ್ಡ ಆತಂಕ ಸೃಷ್ಟಿಗೆ ಕಾರಣವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಅತ್ಯಂತ ಬಡ ದೇಶಗಳಿಗೆ ಅಮೆರಿಕವು ವಿಮಾನದ ಮೂಲಕ ವೈರಸ್ ರಫ್ತು ಮಾಡಿದೆ ಎಂದು ಮಾನವಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ಗಡೀಪಾರು ಅನೈತಿಕವಾಗಿದೆ. ಅವರು ಅಮೆರಿಕನ್ನರನ್ನೂ ಹೈಟಿಯನ್ನರನ್ನೂ ಅಪಾಯಕ್ಕೊಡ್ಡಿದ್ದಾರೆ ಎಂದು ಅಮೆರಿಕದ ಡೆಮಕ್ರಾಟ್ ಪ್ರತಿನಿಧಿ ಆಂಡಿ ಲೆವಿನ್ ಹೇಳಿದ್ದಾರೆ. ರೋಗ ಹರಡದಿರಲು ಹೈಟಿಗೆ ಹೋಗುವ ವಿಮಾನ ರದ್ದುಪಡಿಸಬೇಕೆಂದು ಅವರು ಟ್ವೀಟ್ ಮಾಡಿದ್ದಾರೆ. ಇಲ್ಲಿನ ಕೊರೊನಾ ಕೇಸುಗಳಲ್ಲಿ ಐದರಲ್ಲೊಂದು ಕಳೆದವಾರ ಅಮೆರಿಕದಿಂದ ಬಂದವರಲ್ಲಾಗಿದೆ ಎಂದು ಗ್ವಾಟಮಾಲ ಸರಕಾರ ದೃಢಪಡಿಸಿದೆ. ಮೆಕ್ಸಿಕೊ, ಹೈಟಿಯಿಂದ ಬಂದವರಲ್ಲಿ ಕೊರೊನಾ ವೈರಸ್ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡುವಾರ ಮೊದಲು ಅಮೆರಿಕದಿಂದ ಬಂದ ಮೂವರು ಹೈಟಿಯ ಪ್ರಜೆಗಳಿಗೆ ಕೊರೊನಾ ಬಂದಿದೆ. ಮೆಕ್ಸಿಕೊ ಗಡಿ ನಗರ ನ್ಯೂವೊ ಲಾರೆಡೊದಲ್ಲಿ ಅಮೆರಿಕದಿಂದ ಬಂದ ವ್ಯಕಿಯೊಬ್ಬರಿಂದ ಹದಿನಾಲ್ಕು ಮಂದಿಗೆ ರೋಗ ಹರಡಿದೆ. ಕ್ಯಾಥೊಲಿಕ್ ಅಭಯ ಕೇಂದ್ರದಲ್ಲಿದ್ದವರಿಗೂ ವೈರಸ್ ಹಬ್ಬಿದೆ. ಕ್ಯೂಬ, ಮೆಕ್ಸಿಕೊ, ಹೊಂಡುರಾಸ್, ಕ್ಯಾಮರೂನ್ ನಿವಾಸಿಗಳಿಗೆ ವೈರಸ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೂರು ಮಕ್ಕಳ ಸಹಿತ 15 ಮಂದಿಯನ್ನು ಐಸೊಲೇಶನ್‍ನಲ್ಲಿರಿಸಲಾಗಿದೆ.

ಅಮೆರಿಕದಿಂದ ಗಡೀಪಾರುಗೊಳಿಸಿದವರಿಂದ ವೈರಸ್ ಹರಡಿದ್ದನ್ನು ಅಮೆರಿಕ ಇಮಿಗ್ರೇಶನ್ ಆಂಡ್ ಕಸ್ಟಮ್ಸ್ ಎಂಪೋರ್ಸ್‍ಮೆಂಟ್ ಕೂಡ ದೃಢಪಡಿಸಿದೆ. ಹೈಟಿಯಲ್ಲಿ 57 ಪ್ರಕರಣಗಳು ದೃಢೀಕರಿಸಲ್ಪಟಿದ್ದು ನೂರಕ್ಕೂ ಹೆಚ್ಚು ಐಟಿಯವರು ಈ ವಾರ ಅಮೆರಿಕದಿಂದ ಬರಲಿದ್ದಾರೆ ಎಂದು ಹೈಟಿ ಪ್ರಧಾನ ಮಂತ್ರಿ ಜೊಸೆಫ್ ಜೌತ್ ತಿಳಿಸಿದ್ದಾರೆ. ಅವರು ಮನೆಗೆ ಬರುತ್ತಿದ್ದಾರೆ. ನಾವು ಅವರನ್ನು ಸ್ವೀಕರಿಸುವೆವು ಎಂದು ಅವರು ಹೇಳಿದರು. ಅಮೆರಿಕದಿಂದ ಬಂದಿರುವ 51 ಮಂದಿಗೆ ಕೊರೊನಾ ಇದೆ ಎಂದು ಗ್ವಾಟಮಾಲ ಅಧ್ಯಕ್ಷ ಅಲಜಾಂಡ್ರೊ ಮಿಯಮಟ್ರೊಯಿ ಸೋಮವಾರ ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.