2,600 ಮುಸ್ಲಿಮರ ಹತ್ಯೆ ಮಾಡುತ್ತೇವೆ, ಈಗಾಗಲೇ ಇಬ್ಬರ ಹತ್ಯೆ ಮಾಡಿದ್ದೇವೆ ಎಂದ ಗೋರಕ್ಷಣಾ ದಳ ವಿಡಿಯೋ ವೈರಲ್

0
2337

ಸನ್ಮಾರ್ಗ ವಾರ್ತೆ

ಆಗ್ರಾ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪ್ರತೀಕಾರವಾಗಿ, ಉತ್ತರ ಪ್ರದೇಶದ ಆಗ್ರಾದಲ್ಲಿ ಇಬ್ಬರು ಮುಸ್ಲಿಂ ಪುರುಷರನ್ನು ಹತ್ಯೆ ಮಾಡಿರುವುದಾಗಿ ಪ್ರತಿಪಾದಿಸುವ ಆತಂಕಕಾರಿ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ‘ಕ್ಷತ್ರಿಯ ಗೋ ರಕ್ಷಣಾ ದಳ’ದ ಸದಸ್ಯರೆಂದು ಹೇಳಿಕೊಳ್ಳುವವರು ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಭವಿಷ್ಯದಲ್ಲಿ 2,600 ಮುಸ್ಲಿಮರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ವೀಡಿಯೊದಲ್ಲಿ ಆಯುಧಗಳನ್ನು ತೋರಿಸುತ್ತಾ, ಇಬ್ಬರು ವ್ಯಕ್ತಿಗಳು ಹತ್ಯೆಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ. ಪಹಲ್ಗಾಮ್ ದಾಳಿಯ ಸೇಡು ತೀರಿಸಿಕೊಳ್ಳುವುದಾಗಿ ಘೋಷಣೆ ಮಾಡುತ್ತಿರುವ ಈ ವೀಡಿಯೊವು ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಮುಕ್ತಾಯವಾಗುತ್ತದೆ. ಈ ಭಯಾನಕ ದೃಶ್ಯವು ಮುಸ್ಲಿಂ ಸಮುದಾಯದಲ್ಲಿ ಆತಂಕ ಮತ್ತು ಭಯವನ್ನು ಉಂಟುಮಾಡಿದೆ.

ಪಹಲ್ಗಾಮ್ ದಾಳಿಯ ನಂತರ ದೇಶದಾದ್ಯಂತ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ನಡುವೆ, ಇಂತಹ ಬಹಿರಂಗ ಹಿಂಸಾಚಾರದ ಬೆದರಿಕೆಗಳು ಭಾರತದ ಆಂತರಿಕ ಶಾಂತಿಗೆ ತೀವ್ರ ಆಘಾತ ನೀಡಿವೆ. ಸರ್ಕಾರ ಮತ್ತು ಪೋಲಿಸ್ ಇಲಾಖೆ, ಅಧಿಕಾರಿಗಳು ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ದೇಶಾದ್ಯಂತ ಕೇಳಿ ಬಂದಿದೆ.