ಸನ್ಮಾರ್ಗ ವಾರ್ತೆ
ಮುಂಬೈ, ಆ. 22: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯನ್ನು ವಿಚಾರಣೆಗೆ ಗುರಿಪಡಿಸಲು ಎಂಫೋರ್ಸ್ಮೆಂಟ್ ಡೈರಕ್ಟರೇಟ್(ಇಡಿ) ಸಿದ್ಧವಾಗಿದ್ದು ಮುಂಬೈಯಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ. ಮುಂಬೈಯ ಇಡಿ ಕಚೇರಿಯ ಮುಂದೆ ನಿಷೇಧಾಜ್ಞೆ ಹೇರಲಾಗಿದ್ದು ಬೆಳಗ್ಗೆ ಹನ್ನೊಂದೂವರೆ ಗಂಟೆಗೆ ರಾಜ್ ಠಾಕ್ರೆ ಇಡಿ ಕಚೇರಿಗೆ ಬರಲಿದ್ದಾರೆ.
2005ರಲ್ಲಿ ಮುಂಬೈ ದಾದರಿನ ಶಿವಾಜಿ ಪಾರ್ಕಿನನಲ್ಲಿ ಕೋಹಿನೂರ್ ಟವರ್ ಮತ್ತು ಹಣಕಾಸು ಸಂಸ್ಥೆ ಐಎಲ್ ಆಂಡ್ ಎಫ್ಎಸ್ಗೆ ಸಂಬಂಧಿಸಿ ಆರ್ಥಿಕ ಅಕ್ರಮವನ್ನು ತನಿಖೆ ನಡೆಯುತ್ತಿದ್ದು ರಾಜ್ ಠಾಕ್ರೆಯನ್ನು ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ರಾಜ್ ಠಾಕ್ರೆಯ ಪಾಲುದಾರಿಕೆಯಿರುವ ನಿರ್ಮಾಣ ಕಂಪೆನಿ ಕೊಹಿನೂರ್ ಸಿಟಿಎಲ್ಎನ್ ಶಿವಾಜಿ ಪಾರ್ಕಿನಲ್ಲಿ ಕೊಹಿನೂರ್ ಟವರ್ ನಿರ್ಮಾಣ ಮಾಡಿತ್ತು.
ರಾಜ್ ಠಾಕ್ರೆಯ ವಿಚಾರಣೆಯನ್ನು ವಿರೋಧಿಸಿ ಎಂಎನ್ಎಸ್ ಕಾರ್ಯಕರ್ತರು ಗುಂಪು ಗೂಡಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ನಿಷೇಧಾಜ್ಞೆ ಹೇರಲಾಗಿದೆ. ಘರ್ಷಣೆ ನಡೆಯುವ ಸಾಧ್ಯತೆಯನ್ನು ಮನಗಂಡು ಎಂಎನ್ಎಸ್ ನಾಯಕರನ್ನು ನಿರೀಕ್ಷಣಾ ಬಂಧನದಲ್ಲಿರಿಸಲಾಗಿದೆ.
ರಾಜ್ ಠಾಕ್ರೆಯ ಮನವಿಯಂತೆ ಇಂದು ಕರೆ ನೀಡಿದ್ದ ಬಂದ್ನ್ನು ಎಂಎನ್ಎಸ್ ಹಿಂಪಡೆದಿದೆ. ಮೋದಿ, ಅಮಿತ್ ಶಾ ವಿರುದ್ಧ ನೀಡಿದ ಹೇಳಿಕೆಗಳಾಗಿ ಇಡಿಯನ್ನು ಛೂ ಬಿಡಲಾಗಿದೆ ಎಂದು ಎಂಎನ್ಎಸ್ ಆರೋಪಿಸಿದೆ. ರಾಜ್ ಠಾಕ್ರೆಯನ್ನು ಇಡಿಯನ್ನು ಬಳಸಿ ಬೇಟೆಯಾಡಲಾಗುತ್ತಿದೆ ಎನ್ನುವ ಬಲವಾದ ಆರೋಪ ವ್ಯಕ್ತವಾಗಿದೆ.












