ಸೌದಿ ತೈಲ ಸಂಸ್ಕರಣಾ ಕೇಂದ್ರಕ್ಕೆ ಭಯೋತ್ಪಾದಕ ದಾಳಿ: ತೈಲ ಬೆಲೆ ಭಾರೀ ಹೆಚ್ಚಳ

0
666

ಸನ್ಮಾರ್ಗ ವಾರ್ತೆ

ರಿಯಾದ್,ಸೆ.16: ಸೌದಿ ಅರೇಬಿಯದ ಅರಮ್ಕೊ ತೈಲ ಸಂಸ್ಕರಣಾಗಾರಕ್ಕೆ ಭಯೋತ್ಪಾದನಾ ದಾಳಿ ನಡೆದಿದ್ದು ತೈಲೋತ್ಪಾದನೆಯನ್ನು ಕಡಿಮೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಶೇ. 13ರಷ್ಟು ದರ ಹೆಚ್ಚಳವಾಗಿದ್ದು, ಬ್ಯಾರಲ್‍ ದರ 68.06 ಡಾಲರ್‌ಗೆ ತಲುಪುವ ಮೂಲಕ ಪ್ರತಿ ಬ್ಯಾರಲ್‌ ಕಚ್ಚಾ ತೈಲಕ್ಕೆ 10.2 ಶೇಕಡ ಬೆಲೆ ಏರಿಕೆಯಾಗಿದೆ.

ಅಮೆರಿಕದ ಕಚ್ಚಾ ತೈಲಕ್ಕೆ 60.46 ದರವಾಗಿದ್ದು ಶೇ.10.2 ದರ ಹೆಚ್ಚಳವಾಗಿದೆ. ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೆ ಸುಮಾರು 80 ಡಾಲರ್‍‌ವರೆಗೆ ಬೆಲೆಯೇರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಕಳೆದ 28 ವರ್ಷಗಳಲ್ಲಿ ಕಚ್ಚಾ ತೈಲವು ಒಂದೇ ದಿವಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆಯನ್ನು ಕಂಡಿರಲಿಲ್ಲ. ಅರಮ್ಕೊ ಸಂಸ್ಕರಣಾಗಾರಕ್ಕೆ ಭಯೋತ್ಪಾದನಾ ದಾಳಿ ನಡೆದ ಬಳಿಕ ಸೌದಿ ಅರೇಬಿಯ ತೈಲೋತ್ಪಾದನೆಯನ್ನು ಅರ್ಧಾಂಶಕ್ಕಿಳಿಸಿತು. ಜಗತ್ತಿನ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರಗಳಾದ ಅಬ್‍ವೈಕ, ಅರಮ್ಕೊ,ಕುರೈಸ್‌ಗಳಲ್ಲಿ ಡ್ರೋನ್ ದಾಳಿ ನಡೆದಿದ್ದು ಬೃಹತ್ ಅಗ್ನಿ ಅನಾಹುತವಾಗಿದೆ. ಇದು ಉತ್ಪಾದನಾ ಪ್ರಮಾಣ ಕಡಿಮೆಗೊಳಿಸುವುದಕ್ಕೆ ಕಾರಣವೆನ್ನಲಾಗುತ್ತಿದೆ.

ಅಬ್‍ಕೈಕ್ ಪ್ಲಾಂಟ್ ಪೂರ್ವಸ್ಥಿತಿಗೆ ಮರಳಲು ತಡವಾದರೆ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ತೈಲ ಕೊರತೆ ಕಾಣಿಸಿಕೊಳ್ಳಲಿದೆ. ಡ್ರೋನ್ ದಾಳಿಯನ್ನು ಯಮನ್‍ನ ಹೂಥಿಗಳು ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದರೂ, ಇರಾನ್ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸುತ್ತಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ದೇಶ ಸಜ್ಜಾಗಿದೆ ಎಂದು ಸೌದಿ ದೊರೆ ಸಲ್ಮಾನ್ ಹೇಳಿದರು.

ಇಸ್ರೇಲ್‍ನ ಪ್ರಧಾನಿ ನೆತನ್ಯಾಹುರ ವಿವಾದಾತ್ಮಕ ಹೇಳಿಕೆಯ ವಿರುದ್ಧ ಅರಬ್ ಜಗತ್ತಿನಲ್ಲಿ ದೊಡ್ಡ ಒಗ್ಗಟ್ಟು ಕಂಡು ಬಂದ ಬೆನ್ನಿಗೆ ಶನಿವಾರ ಬೆಳಗ್ಗೆ ಸೌದಿ ತೈಲಾಗಾರಕ್ಕೆ ಡ್ರೋನ್ ದಾಳಿ ನಡೆಯಿತು. ಇಸ್ರೇಲಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳಿದರೆ ಒಂದು ವಾರದೊಳಗೆ ಅತಿಕ್ರಮಿತ ವೆಸ್ಟ್ ಬ್ಯಾಂಕ್‍ನ ಜೋರ್ಡಾನ್ ಕಣಿವೆಯನ್ನು ವಶಪಡಿಸುವೆ ಎಂದು ನೆತನ್ಯಾಹು ಹೇಳಿಕೆ ನೀಡಿದ್ದರು.