ವಾಷಿಂಗ್ಟನ್ ಸೇರಿದಂತೆ ಅಮೇರಿಕಾದ 40 ನಗರಗಳಲ್ಲಿ ಭುಗಿಲೆದ್ದ ಪ್ರತಿಭಟನೆ; ಕರ್ಫ್ಯೂ

0
1316

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜೂ.1: ಪೊಲೀಸರಿಂದ ಕಸ್ಟಡಿಯಲ್ ಹತ್ಯೆಗೆ ಗುರಿಯಾದ ಕಪ್ಪುವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿನ‌ ನಂತರ ಯುಎಸ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ರಾಜಧಾನಿ ವಾಷಿಂಗ್ಟನ್ ಡಿಸಿ ಸೇರಿದಂತೆ 40 ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಭಾನುವಾರ ರಾತ್ರಿ, ಪ್ರತಿಭಟನಾಕಾರರು ಶ್ವೇತಭವನದ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿದರು.

ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಶುಕ್ರವಾರ ಶ್ವೇತಭವನದ ಮುಂದೆ ನಡೆದ ಪ್ರದರ್ಶನಗಳಿಂದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಲ್ಪ ಹೊತ್ತು ಮರೆಯಲ್ಲಿರಿಸಲಾಗಿತ್ತು ಎಂದು ವರದಿ ಮಾಡಿದೆ.

ಸುದ್ದಿ ಚಾನೆಲ್ ಸಿಎನ್ಎನ್ ಪ್ರಕಾರ, ವಾಷಿಂಗ್ಟನ್ ಸೇರಿದಂತೆ 15 ನಗರಗಳಲ್ಲಿ ಸುಮಾರು 5000 ರಾಷ್ಟ್ರೀಯ ಕಾವಲುಗಾರರನ್ನು ನಿಯೋಜಿಸಲಾಗಿದೆ. ಅಗತ್ಯವಿದ್ದಲ್ಲಿ, 2 ಸಾವಿರ ಕಾವಲುಗಾರರನ್ನು ತ್ವರಿತವಾಗಿ ನಿಯೋಜಿಸಿ ಕೊಳ್ಳಲಾಗುವುದು ಎಂದು ವರದಿಯಾಗಿದೆ.

ಮೇ 26 ರಂದು ಅಮೇರಿಕಾಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಫ್ಲಾಯ್ಡ್‌ನನ್ನು ಮಿನ್ನಿಯಾಪೋಲಿಸ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಇದಕ್ಕೂ ಮೊದಲು ಪೊಲೀಸ್ ಅಧಿಕಾರಿಯೊಬ್ಬರು ಫ್ಲಾಯ್ಡ್‌ನನ್ನು ರಸ್ತೆಯ ಮೇಲೆ ಮಲಗಿಸಿ ಸುಮಾರು ಎಂಟು ನಿಮಿಷಗಳ ಕಾಲ ಆತನ ಕುತ್ತಿಗೆಯನ್ನು ಮೊಣಕಾಲಿನಿಂದ ಅದುಮಿದ್ದರು. ಈ ಸಮಯದಲ್ಲಿ ಫ್ಲಾಯ್ಡ್‌ನ ಕೈಗಳಿಗೆ ಬೇಡಿ ತೊಡಿಸಲಾಗಿತ್ತು. 46 ವರ್ಷದ ಜಾರ್ಜ್ ತನ್ನ ಕುತ್ತಿಗೆ ಮೇಲಿಂದ ಮೊಣಕಾಲು ತೆಗೆಯುವಂತೆ ಪೊಲೀಸ್ ಅಧಿಕಾರಿಗೆ ಮನವಿ ಮಾಡುತ್ತಲೇ ಇದ್ದ. ಅವರು, ‘ನಿಮ್ಮ ಮೊಣಕಾಲು ನನ್ನ ಕುತ್ತಿಗೆಯ ಮೇಲೆಗ ಇದೆ. ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ…ನೀವು ನನ್ನನ್ನು ಕೊಲ್ಲುತ್ತಿದ್ದೀರಿ…”ಎಂದು ಹೇಳುವ ವಿಡಿಯೋದಲ್ಲಿ ಕ್ರಮೇಣ ಆತನ ಚಲನವಲನಗಳು ನಿಂತು ಹೋದವು. ತದನಂತರ ಪೊಲೀಸ್, “ಎದ್ದು ಕಾರಿನಲ್ಲಿ ಕುಳಿತುಕೋ” ಎಂದು ಹೇಳುತ್ತಾರೆ, ಆಗಲೂ ಪ್ಲಾಯ್ಡ್‌ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಈ ಸಮಯದಲ್ಲಿ ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ಸಾವನ್ನಪ್ಪಿದ್ದಾಗಿ ಘೋಷಿಸಲಾಯ್ತು.

ಇದು ಕರಿವರ್ಣೀಯರ ಮೇಲೆ ನಡೆದ ದೌರ್ಜನ್ಯ ಎಂದು ಜನರು ಪ್ರತಿಭಟನೆಗಿಳಿದಿದ್ದು, ಕಪ್ಪು ವರ್ಣೀಯರ ಜೀವಗಳೂ ಅಮೂಲ್ಯವಾದುದು ಎಂಬ ಹೆಸರರಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.