ಸನ್ಮಾರ್ಗ ವಾರ್ತೆ
ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನಲ್ಲಿ ಭಾನುವಾರ(ಫೆ.12) ಗೇಬ್ರಿಯೆಲ್ ಚಂಡಮಾರುತ ಅಪ್ಪಳಿಸಿದೆ. ಇದರಿಂದ ದೇಶದ ಹಲವು ಭಾಗಗಳಿಗೆ ಹಾನಿಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಗೇಬ್ರಿಯೆಲ್ ಚಂಡಮಾರುತದ ಭಾರೀ ಅನಾಹುತದ ಹಿನ್ನೆಲೆ ನ್ಯೂಜಿಲೆಂಡ್ ಸರ್ಕಾರ ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ ಮಾಡಿದೆ ಎಂದು ತುರ್ತು ನಿರ್ವಹಣಾ ಸಚಿವ ಕೀರನ್ ಮೆಕ್‌ಅನುಲ್ಟಿ ಹೇಳಿದ್ದಾರೆ. ನ್ಯೂಜಿಲೆಂಡ್ ಇತಿಹಾಸದಲ್ಲಿ ಮೂರನೇ ಬಾರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದಂತಾಗಿದೆ ಎಂದು ಮಾಧ್ಯಮಗಳು ವರದಿ ಹೇಳಿವೆ.
ಈ ಹಿಂದೆ 2011 ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ 6.3 ಭೂಕಂಪ ಉಂಟಾದಾಗ ಮತ್ತು ಕೋವಿಡ್ ಪಿಡುಗು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ನ್ಯೂಜಿಲೆಂಡ್‌ನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.
ನ್ಯೂಜಿಲೆಂಡ್‌ನ ಉತ್ತರ ಭಾಗಕ್ಕೆ ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮ ಜೋರು ಗಾಳಿ ಬೀಸುತ್ತಿದ್ದು, ವ್ಯಾಪಕ ಮಳೆ ಸುರಿಯುತ್ತಿದೆ. ಸ್ಥಳದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ವ್ಯವಸ್ಥೆ ಹಾಳಾಗಿದ್ದು ಲಕ್ಷಾಂತರ ಮನೆಗಳು ಕತ್ತಲಲ್ಲಿ ಮುಳುಗುವಂತಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆಕ್ಲೆಂಡ್, ನಾರ್ತ್ಲ್ಯಾಂಡ್ ಗಿಸ್ಬೋರ್ನ್, ಹಾಕ್ಸ್ ಬೇ ಸೇರಿದಂತೆ ಮೊದಲಾದ ಪ್ರದೇಶಗಳಲ್ಲಿ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು 2 ಲಕ್ಷ ಮನೆಗಳಿಗೆ ತೊಂದರೆಯಾಗಿದೆ. 5 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಗೇಬ್ರಿಯಲ್ ಚಂಡಮಾರುತ ಈಶಾನ್ಯಕ್ಕೆ 100 ಕಿ.ಮೀ ದೂರದಲ್ಲಿ ಸಣ್ಣ ದ್ವೀಪಗಳ ಮೇಲೆ ಬೀಸಿದೆ. ಮತ್ತೆ ನೈರುತ್ಯ ದಿಕ್ಕಿಗೆ ಹೊರಳಿದೆ ಎಂದು ಹವಾಮಾನ ಸಂಸ್ಥೆ ಮೆಟಸರ್ವಿಸ್ ತಿಳಿಸಿದೆ.
ಚಂಡಮಾರುತವು ಉತ್ತರ ದ್ವೀಪದಾದ್ಯಂತ ಭಾರೀ ಮಳೆ, ಪ್ರವಾಹ ಉಂಟು ಮಾಡಿದೆ. ಉತ್ತರ ದ್ವೀಪದಾದ್ಯಂತ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ರಸ್ತೆಗಳು ಬಂದ್ ಆಗಿವೆ. ಕೆಲವು ಪಟ್ಟಣಗಳಲ್ಲಿ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದೆ.
ಪ್ರವಾಹದ ನೀರಿನಿಂದ ಸುತ್ತುವರೆದಿರುವ ಕಟ್ಟಡಗಳ ಮೇಲೆ ಜನರು ಕುಳಿತಿದ್ದಾರೆ. ಭೂಕುಸಿತದ ನಂತರ ಬೆಟ್ಟಗಳ ಕೆಳಭಾಗದಲ್ಲಿರುವ ಮನೆಗಳು ಮತ್ತು ನೀರೊಳಗಿನ ರಸ್ತೆಗಳ ಫೋಟೋಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ನ್ಯೂಜಿಲೆಂಡ್ ನೌಕಾಪಡೆಯ ನೌಕೆಯು ದೇಶದ ಪೂರ್ವ ಕರಾವಳಿಯಲ್ಲಿ ಮಂಗಳವಾರ (ಫೆ.14) ಬೆಳಿಗ್ಗೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.