ದೇವಸ್ಥಾನದ ಬಳಿ ನೀರು ಕುಡಿದಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ

0
248

ಸನ್ಮಾರ್ಗ ವಾರ್ತೆ

ಉ.ಪ್ರ: ದೇವಸ್ಥಾನದ ಸಮೀಪದ ಕೈ ಪಂಪ್‌ನಿಂದ ನೀರು ಕುಡಿದಿದ್ದಕ್ಕಾಗಿ ದಲಿತ ಯುವಕನನ್ನು ಏಳು ಮಂದಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಸಂತ್ರಸ್ತ ವ್ಯಕ್ತಿಯನ್ನು 24 ವರ್ಷದ ಅಭಿಷೇಕ್ ಗೌತಮ್ ಎಂದು ಗುರುತಿಸಲಾಗಿದ್ದು, ಈ ಘಟನೆ ಜುಲೈ 26 ರಂದು ನಡೆದಿದೆ ಎಂದು ಪೋಲೀಸರು ಹೇಳಿದ್ದಾರೆ.

ಸಂತ್ರಸ್ತನ ದೂರಿನ ಪ್ರಕಾರ, ಹಲ್ಲೆಕೋರರು ಜಾತಿ ನಿಂದನೆ ಪದಗಳನ್ನು ಬಳಸಿದ್ದು, ಗೌತಮ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ನಾಲಿಗೆ ಹೊರ ಚಾಚುವವರೆಗೆ ಕುತ್ತಿಗೆಯನ್ನು ತಮ್ಮ ಕಾಲಿನಿಂದ ಒತ್ತಿ ಹಿಡಿದಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೆ, ನಿನಗೂ ನಿನ್ನ ಕುಟುಂಬಕ್ಕೂ ಹಲ್ಲೆ ಮಾಡುವುದಾಗಿ ಅವರು ಬೆದರಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೀನಾಕ್ಷಿ ಕಾತ್ಯಾಯನ್ ಹೇಳಿದ್ದಾರೆ.

ಗೌತಮ್ ಒಬ್ಬ ಕಬಡ್ಡಿ ಆಟಗಾರ ಮತ್ತು ಬಿಎ ವಿದ್ಯಾರ್ಥಿ. ದೇವಸ್ಥಾನದ ಹತ್ತಿರ ಇರುವ ಸಾರ್ವಜನಿಕ ಮೈದಾನಕ್ಕೆ ಆಗಾಗ್ಗೆ ಬಂದಿದ್ದಕ್ಕಾಗಿ ಗುಂಪಿನ ಕೆಂಗಣ್ಣಿಗೆ ಗುರಿಯಾಗಿದ್ದರು. ದೂರಿನ ಪ್ರಕಾರ ಕೈ ಪಂಪು ಬಳಸದಂತೆ ಅಥವಾ ದೇವಸ್ಥಾನದ ಮೇಲೆ ಕುಳಿತುಕೊಳ್ಳದಂತೆ ಈ ಹಿಂದೆ ಅವರು ಎಚ್ಚರಿಕೆ ನೀಡಿದ್ದರು.

ಈ ಕುರಿತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಗೌತಮ್ ಆರೋಪಿಸಿದ್ದಾರೆ. ಬಳಿಕ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ನ್ಯಾಯ ಕೋರಿ ಅರ್ಜಿ ಸಲ್ಲಿಸಿದ್ದರು.

ಏಳು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಗುರುವಾರ ಆದೇಶಿಸಿದೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.